ಸಂಶೋಧನೆ, ವಿಸ್ತೃತ ಅಧ್ಯಯನದಿಂದ ಸತ್ಯದರ್ಶನ

ಲೋಕಬಂಧು ನ್ಯೂಸ್ ಉಡುಪಿ, ಜೂ.21
ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಮತ್ತು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಆಶ್ರಯದಲ್ಲಿ ಚೇಳ್ಯಾರುಗುತ್ತು ಎಸ್.ಆರ್. ಹೆಗ್ಡೆ ಚಾರಿಟೆಬಲ್ ಟ್ರಸ್ಟ್ ವತಿಯಿಂದ ನೀಡಲಾಗುವ ಪೊಳಲಿ ಶೀನಪ್ಪ ಹೆಗ್ಡೆ ಮತ್ತು ಎಸ್.ಆರ್. ಹೆಗ್ಡೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಎಂಜಿಎಂ ಕಾಲೇಜು ಸಭಾಂಗಣದಲ್ಲಿ ಶನಿವಾರ ನಡೆದಿದ್ದು ಹಿರಿಯ ಲೇಖಕ, ಸಂಶೋಧಕ ಡಾ. ಬಿ. ಶಿವರಾಮ ಶೆಟ್ಟಿ ಅವರಿಗೆ ಪ್ರಶಸ್ತಿ ನೀಡಲಾಯಿತು.ಅಧ್ಯಕ್ಷತೆ ವಹಿಸಿದ್ದ ಹಿರಿಯ ವಿದ್ವಾಂಸ ಪ್ರೊ. ಬಿ.ಎ. ವಿವೇಕ ರೈ ಮಾತನಾಡಿ ಇಂದಿನ ದಿನಗಳಲ್ಲಿ ಓದು, ಸಂಶೋಧನೆಗಳು ದೂರಸರಿಯುತ್ತಿವೆ. ವಿಸ್ತೃತ ಅಧ್ಯಯನ ಮತ್ತು ಕ್ಷೇತ್ರ ಕಾರ್ಯಗಳಷ್ಟೇ ಸತ್ಯದರ್ಶನ ಮಾಡಿಸುತ್ತವೆ ಎಂದರು.


ಪೊಳಲಿ ಶೀನಪ್ಪ ಹೆಗ್ಡೆ ಬದುಕು ಮತ್ತು ಬರಹಗಳು ಎಂದಿಗೂ ಮಾದರಿ. ಸ್ವಾತಂತ್ರ್ಯ ಪೂರ್ವದಿಂದಲೇ ಹೆಗ್ಡೆ ಅವರು ತುಳುನಾಡಿನ ಕುರಿತು ಅನೇಕ ಸಂಶೋಧನೆ ನಡೆಸಿ ಕೃತಿಗಳನ್ನು ನೀಡಿದ್ದಾರೆ. ಆ ಸಂದರ್ಭದಲ್ಲಿ ಅನೇಕ ಹೊಳಹುಗಳನ್ನು ನೀಡಿ ಮುಂದಿನ ಅಧ್ಯಯನಕಾರರಿಗೆ ದಾರಿದೀಪವಾಗಿದ್ದಾರೆ. ಗದ್ಯರೂಪದಲ್ಲಿ ತುಳುನಾಡಿನ ಜಾನಪದ ಸಂಪತ್ತನ್ನು ಮುಖ್ಯವಾಗಿ ಪಾಡ್ಡನದ ಕಥೆಗಳನ್ನು ಸಂಗ್ರಹಿಸಿ ಜಾನಪದ ಅಧ್ಯಂನಕಾರರಿಗೆ ಮಾರ್ಗದರ್ಶಿ ಸೂತ್ರ ಹೆಣೆದಿದ್ದಾರೆ ಎಂದರು.


ಪ್ರಶಸ್ತಿ ಸ್ವೀಕರಿಸಿದ ಡಾ.ಬಿ.ಶಿವರಾಮ ಶೆಟ್ಟಿ, `ಕಣ್ಣಾರೆ ಕಂಡರೂ ಪರಾಂಬರಿಸಿ ನೋಡು' ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿ, ಸಂಶೋಧನೆ ಎಂದರೆ ಹೊಸತನ್ನು ಹೇಳುವುದಲ್ಲ, ಇಲ್ಲದ್ದನ್ನೂ ಹೇಳುವುದಲ್ಲ. ಬದಲು ಆಳವಾದ ಅಭ್ಯಾಸದ ಫಲವಾಗಿ ಒಡಮೂಡುವ ವಿಶಿಷ್ಟ ಸತ್ಯ. ಆ ಬಗೆಯ ಸತ್ಯದ ಹೊಳಹುಗಳಿಗೆ ಕಾಲಾತೀತವಾಗಿ ಎಂದೂ ಸಮಸ್ಯೆಗಳು ಬರುವುದಿಲ್ಲ. ಅಂಥ ಅಧ್ಯಯನಗಳು ಪರಾಂಬರಿಸಿ ನೋಡುವುದರಿಂದ ಸಾಧ್ಯವಾಗುತ್ತದೆ ಎಂದರು.


ಕಾಸರಗೋಡು ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಪ್ರೊ.ಚೇತನ್ ಮುಂಡಾಜೆ ಅಭಿನಂದನ ಮಾತುಗಳನ್ನಾಡಿದರು. ಎಂಜಿಎಂ ಪದವಿ ಕಾಲೇಜಿನ ಪ್ರಾಂಶುಪಾಲೆ ಡಾ.ಗಾಯತ್ರಿ ಜಿ. ಪೈ ಉಪಸ್ಥಿತರಿದ್ದರು.


ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ. ಜಗದೀಶ್ ಶೆಟ್ಟಿ ಸ್ವಾಗತಿಸಿದರು. ಪ್ರಶಸ್ತಿ ಪ್ರಾಯೋಜಕರಾದ ಚೇಳ್ಯಾರುಗುತ್ತು ಎಸ್.ಆರ್. ಹೆಗ್ಡೆ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷೆ ಡಾ.ಇಂದಿರಾ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗರಾಜ ಶಂಕರನಾರಾಯಣ ಪ್ರಾರ್ಥಿಸಿದರು. ಆರ್.ಆರ್.ಸಿ. ಸಹಸಂಶೋಧಕ ಡಾ.ಅರುಣ್ ಕುಮಾರ್ ಎಸ್.ಆರ್. ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.