ಹೆತ್ತವರನ್ನು ವೃದ್ಧಾಶ್ರಮಕ್ಕೆ ಕಳಿಸುವುದು ಆತಂಕಕಾರಿ

ಲೋಕಬಂಧು ನ್ಯೂಸ್ ಉಡುಪಿ, ಜೂ.21
ಎಲ್ಲಾ ತಂದೆ-ತಾಯಂದಿರು ಮಕ್ಕಳ ಹಿತಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡುತ್ತಾರೆ. ಆದರೆ, ಅವರಿಗೆ ವಯಸ್ಸಾದಾಗ ಮಕ್ಕಳು ವೃದ್ಧಾಶ್ರಮಕ್ಕೆ ತಳ್ಳುತ್ತಿರುವುದು, ಅದೇ ಅವರ ಕೊರಗಿಗೆ ಕಾರಣವಾಗುತ್ತಿರುವುದು ಆತಂಕಕಾರಿ. ಕಣ್ಣಿಗೆ ಕಾಣುವ ದೇವರಾದ ಪಾಲಕರಿಗೆ ಪ್ರೀತಿಯ ಧಾರೆ ಎರೆದು ಸಂತೋಷದಿಂದ ಸಲಹಬೇಕು ಎಂದು ಸಮಾನ ಮನಸ್ಕ ಕನ್ನಡಿಗರ ವೇದಿಕೆ ಸದಸ್ಯ ವಾಸುದೇವ ಪಿ. ಸಲಹೆ ನೀಡಿದರು.ಇಲ್ಲಿನ ಕಾತ್ಯಾಯಿನಿ ನಗರದಲ್ಲಿ ಸಮಾನ ಮನಸ್ಕ ಕನ್ನಡಿಗರ ವೇದಿಕೆಯಿಂದ ಭಾನುವಾರ ಆಯೋಜಿಸಿದ ವಿಶ್ವ ಅಪ್ಪಂದಿರ ದಿನಾಚರಣೆಯಲ್ಲಿ ಅವರು ಮಾತನಾಡಿದರು.


ವೇದಿಕೆ ಅಧ್ಯಕ್ಷ ಶ್ರೀನಿವಾಸ ರಾವ್ ಕೆ. ಮಾತನಾಡಿ, ಅಪ್ಪ ನಕ್ಕಿದ್ದಷ್ಟನ್ನೇ ಕಾಣುತ್ತೇವೆ. ಬಿಕ್ಕಿದ್ದು ಎಂದೂ ಕಾಣದು. ಇಂದು ಮಕ್ಕಳೆಲ್ಲ ವಿದೇಶಿ, ತಂದೆ ತಾಯಿ ಪರದೇಶಿ ಆಗುತ್ತಿದ್ದಾರೆ. ಸಾಕಷ್ಟು ಹಣ ಗಳಿಸುತ್ತಿದ್ದರೂ ಹೆತ್ತವರ ಕಾಳಜಿ ಮರೆಯುತ್ತಿದ್ದಾರೆ. ಸಂಸ್ಕಾರಯುತ ಶಿಕ್ಷಣ ಸಿಗದಿರುವುದೇ ಅದಕ್ಕೆ ಕಾರಣ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.


ಕಾರ್ಯಕ್ರಮದಲ್ಲಿ ಅನುರಾಧ ಜಿ.ಎಸ್., ಸುರೇಶ್ ಡಿ., ಹೇಮಲತಾ, ಶಿವಾನಿ, ಲಕ್ಷ್ಮೀ, ವಿಜಯಲಕ್ಷ್ಮೀ, ರಾಘವೇಂದ್ರ, ಚಂದ್ರಶೇಖರ, ಶ್ರೀದೇವಿ, ರಾಜೀವ, ಜಗದೀಶ, ಶ್ರೀನಿವಾಸ ಡಿ., ರತ್ನಾ ಪಿ, ಸರೋಜಿನಿ, ಆರಾಧ್ಯ, ಐಶ್ವರ್ಯ, ರಮೇಶ ಮೊದಲಾದವರಿದ್ದರು.