ಲೋಕಬಂಧು ನ್ಯೂಸ್ | ಕಲ್ಬುರ್ಗಿ, ಜೂ.16
ರಾಜ್ಯದಲ್ಲಿ ರಸಗೊಬ್ಬರ ಕೊರತೆ ಉಂಟಾಗಿದೆ ಎಂಬ ಭಾವನೆ ಮೂಡಿಸಿ ಕೇಂದ್ರ ಸರ್ಕಾರದ ಮೇಲೆ ಆರೋಪ ಹೊರಿಸಲು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಸೇಡಂನ ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ್ ಆರೋಪಿಸಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ರಸಗೊಬ್ಬರ ಪೂರೈಕೆ ಮಾಡಿದ್ದರೂ ಅದನ್ನು ರೈತರಿಗೆ ಸಮರ್ಪಕವಾಗಿ ತಲುಪಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಟೀಕಿಸಿದರು.
ಜನವರಿಯಿಂದ ಮಾರ್ಚ್ ಅವಧಿಯಲ್ಲಿ ರಾಜ್ಯದ ಬೇಡಿಕೆಯನ್ನು ಮೀರಿ 0.33 ಲಕ್ಷ ಮೆಟ್ರಿಕ್ ಟನ್ ಯೂರಿಯಾ, 1.29 ಲಕ್ಷ ಮೆಟ್ರಿಕ್ ಟನ್ ಡಿಎಪಿ ಹಾಗೂ 1.58 ಲಕ್ಷ ಮೆಟ್ರಿಕ್ ಟನ್ ಎನ್‌ಪಿಕೆಎಸ್ ರಸಗೊಬ್ಬರವನ್ನು ಕೇಂದ್ರ ಸರ್ಕಾರ ಪೂರೈಸಿದೆ ಎಂದವರು ಮಾಹಿತಿ ನೀಡಿದರು.
ಜೂನ್ 10ರ ವರೆಗೆ ರಾಜ್ಯಕ್ಕೆ 3.13 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಅಗತ್ಯವಿದ್ದರೂ 5.59 ಲಕ್ಷ ಮೆಟ್ರಿಕ್ ಟನ್ ಲಭ್ಯತೆ ಖಚಿತಪಡಿಸಲಾಗಿದೆ. ಅದೇ ರೀತಿ 1.89 ಲಕ್ಷ ಮೆಟ್ರಿಕ್ ಟನ್ ಡಿಎಪಿ ಅಗತ್ಯವಿದ್ದರೆ 2.57 ಲಕ್ಷ ಮೆಟ್ರಿಕ್ ಟನ್ ಲಭ್ಯತೆ ಒದಗಿಸಲಾಗಿದೆ. ಪ್ರಸ್ತುತ ರಾಜ್ಯದಲ್ಲಿ 1.09 ಲಕ್ಷ ಮೆಟ್ರಿಕ್ ಟನ್ ಡಿಎಪಿ ದಾಸ್ತಾನು ಇದೆ ಎಂದರು.
ಎನ್‌ಪಿಕೆಎಸ್ ರಸಗೊಬ್ಬರದ ಬೇಡಿಕೆ 4.36 ಲಕ್ಷ ಮೆಟ್ರಿಕ್ ಟನ್ ಇದ್ದರೆ, 9.28 ಲಕ್ಷ ಮೆಟ್ರಿಕ್ ಟನ್ ಲಭ್ಯತೆ ಖಚಿತಪಡಿಸಲಾಗಿದೆ. ಗಣನೀಯ ಪ್ರಮಾಣದಲ್ಲಿ ಮಾರಾಟವಾದ ಬಳಿಕವೂ ರಾಜ್ಯದಲ್ಲಿ 5.6 ಲಕ್ಷ ಮೆಟ್ರಿಕ್ ಟನ್‌ಗಿಂತ ಹೆಚ್ಚು ರಸಗೊಬ್ಬರ ದಾಸ್ತಾನು ಉಳಿದಿದೆ ಎಂದು ಅಂಕಿ-ಅಂಶ ಉಲ್ಲೇಖಿಸಿದರು.
ರಾಜ್ಯ ಸರ್ಕಾರ ಜಿಲ್ಲೆಗಳ ನಡುವೆ ಸಮರ್ಪಕ ವಿತರಣೆ ವ್ಯವಸ್ಥೆ ರೂಪಿಸದಿರುವುದೇ ರೈತರಿಗೆ ಗೊಬ್ಬರ ಕೊರತೆಯ ಅನುಭವವಾಗಲು ಪ್ರಮುಖ ಕಾರಣವಾಗಿದೆ ಎಂದವರು ಆರೋಪಿಸಿದರು.
ಸೇಡಂ ಸೇರಿದಂತೆ ವಿವಿಧ ತಾಲೂಕುಗಳಲ್ಲಿ ರಸಗೊಬ್ಬರ ದಾಸ್ತಾನು ಮತ್ತು ಕಳ್ಳಸಂತೆ ದಂಧೆ ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ದೂರಿದರು.
ರಾಜ್ಯದಲ್ಲಿ ರಸಗೊಬ್ಬರ ಲಭ್ಯವಿದ್ದರೂ ರೈತರಿಗೆ ಸಿಗುತ್ತಿಲ್ಲ ಎಂದರೆ ಅದರ ಹಿಂದೆ ದೊಡ್ಡ ಮಟ್ಟದ ಅಕ್ರಮ ಅಥವಾ ಹಗರಣದ ಸಾಧ್ಯತೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ರಾಜಕುಮಾರ ಪಾಟೀಲ್ ತೆಲ್ಕೂರ್, ರಾಜ್ಯ ಸರ್ಕಾರ ತಕ್ಷಣ ಜಿಲ್ಲಾವಾರು ರಸಗೊಬ್ಬರ ದಾಸ್ತಾನು ಮತ್ತು ವಿತರಣೆಯ ಸಂಪೂರ್ಣ ವಿವರಗಳನ್ನು ಸಾರ್ವಜನಿಕರಿಗೆ ತಿಳಿಸಬೇಕು. ಜೊತೆಗೆ ಕಾಳಸಂತೆಕೋರರು ಹಾಗೂ ಅಕ್ರಮ ದಾಸ್ತಾನು ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಅಧಿಕೃತ ದಾಖಲೆಗಳ ಪ್ರಕಾರ 2026ರ ಜೂ. 12ರ ವರೆಗೆ ರಾಜ್ಯದಲ್ಲಿ 3.10 ಲಕ್ಷ ಮೆಟ್ರಿಕ್ ಟನ್ ಯೂರಿಯಾ, 1.05 ಲಕ್ಷ ಮೆಟ್ರಿಕ್ ಟನ್ ಡಿಎಪಿ ಸೇರಿದಂತೆ ಒಟ್ಟು 10.60 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಇದೆ ಎಂದವರು ಹೇಳಿದರುಕೇಂದ್ರ ಸರ್ಕಾರ ಬೇಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ರಸಗೊಬ್ಬರ ಒದಗಿಸಿದ್ದರೂ, ರೈತರ ಕೈಗೆ ಅದು ತಲುಪದಿರುವುದು ರಾಜ್ಯ ಸರ್ಕಾರದ ಆಡಳಿತಾತ್ಮಕ ವೈಫಲ್ಯವನ್ನು ಬಿಂಬಿಸುತ್ತದೆ ಎಂದು ಕಿಡಿಕಾರಿದರು.
