ದುಶ್ಚಟಗಳಿಂದ ದೂರವಿರುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು

ಲೋಕಬಂಧು ನ್ಯೂಸ್ | ಉಡುಪಿ, ಜೂ.20
ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು ಜೀವನದಲ್ಲಿ ಸಾಧನೆ ಮಾಡುವ ಕುರಿತು ಯೋಚಿಸಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ನಿತಿನ್ ಯಶವಂತ ರಾವ್ ಹೇಳಿದರು.
ಕಲ್ಯಾಣಪುರ ಪ್ಲಾನೆಟ್ ಮಾರ್ಸ್ ಫೌಂಡೇಶನ್ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ 2025-26ನೇ ಸಾಲಿನಲ್ಲಿ ಎಸ್ಎಸ್ಎಲ್.ಸಿ ಹಾಗೂ ಪಿಯುಸಿ ತರಗತಿಯಲ್ಲಿ ಉತ್ತಮ ಸಾಧನೆಗೈದ ಸಂಸ್ಥೆಯ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದರು.


ವಿದ್ಯಾರ್ಥಿಗಳು ಸುಲಭವಾಗಿ ಮಾದಕ ದ್ರವ್ಯಗಳಂಥ ಕೆಟ್ಟ ಚಟಗಳಿಗೆ ಬಲಿಯಾಗುತ್ತಿರುವುದು ಆತಂಕಕಾರಿ. ಮಕ್ಕಳು ಅನಗತ್ಯವಾಗಿ ಟಿವಿ, ಮೊಬೈಲ್, ಸಾಮಾಜಿಕ ಜಾಲತಾಣಗಳಿಂದ ಪ್ರೇರಿತರಾಗಿ ತಮ್ಮ ಭವಿಷ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಆ ಬಗ್ಗೆ ಪೋಷಕರು ತಮ್ಮ ಮಕ್ಕಳ ಮೇಲೆ ನಿಗಾವಹಿಸಬೇಕು. ಮಕ್ಕಳು ಕಲಿಕೆಯ ಅವಧಿಯಲ್ಲಿ ಉತ್ತಮ ಹವ್ಯಾಸ ರೂಢಿಸಿಕೊಳ್ಳುವತ್ತ ಆಲೋಚನೆ ಮಾಡಬೇಕು. ಪಾಲಕರು ತಮ್ಮ ಮಕ್ಕಳ ಚಲನ ವಲನಗಳ ಬಗ್ಗೆ ನಿಗಾ ವಹಿಸದಿದ್ದರೆ ಮುಂದೆ ಅವರ ಭವಿಷ್ಯ ಮಸುಕಾಗಲಿದೆ ಎಂದು ಎಚ್ಚರಿಸಿದರು.


ಮುಖ್ಯ ಅತಿಥಿಯಾಗಿದ್ದ ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲ ಡಾ.ವಿನ್ಸೆಂಟ್ ಆಳ್ವಾ ಮಾತನಾಡಿ ಯಾವುದೋ ಕಾರಣಗಳಿಗಾಗಿ ಅನಾಥರಾಗಿ, ನಿರ್ಗತಿಕರಾಗಿ ಹಾಗೂ ಅವಕಾಶ ವಂಚಿತ ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣದೊಂದಿಗೆ ಭವಿಷ್ಯ ರೂಪಿಸಿಕೊಳ್ಳಲು ರಾಧಾ ಬಾಬು ಫೌಂಡೇಶನ್ ಪ್ರಾಯೋಜಿತ ಪ್ಲಾನೆಟ್ ಮಾರ್ಸ್ ಸಂಸ್ಥೆ ಕಳೆದ ಹತ್ತು ವರ್ಷಗಳಿಂದ ಶ್ರಮಿಸುತ್ತಿದೆ. ಇಲ್ಲಿನ ವಿದ್ಯಾರ್ಥಿಗಳು ತಮಗೆ ಲಭಿಸಿದ ಅವಕಾಶವನ್ನು ಗಳಿಸಿಕೊಂಡು ಶೈಕ್ಷಣಿಕವಾಗಿ ಪ್ರಗತಿ ಹೊಂದಲು ಸಂಸ್ಥೆ ಪೂರಕ ವಾತಾವರಣ ಕಲ್ಪಿಸಿದ್ದು ವಿದ್ಯಾರ್ಥಿಗಳು ಮುಂದೆ ಸಂಸ್ಥೆಯ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದರು.


ಉಡುಪಿ ಮಕ್ಕಳ ಕಲ್ಯಾಣ ಸಮಿತಿ ಮಾಜಿ ಅಧ್ಯಕ್ಷ ಬಿ.ಕೆ. ನಾರಾಯಣ್ ಅಧ್ಯಕ್ಷತೆ ವಹಿಸಿದ್ದರು.


ಸಂಸ್ಥೆಯ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.


ಉಡುಪಿ ಶ್ರೀಕೃಷ್ಣ ಬಾಲನಿಕೇತನ ಕಾರ್ಯದರ್ಶಿ ರಾಮಚಂದ್ರ ಉಪಾಧ್ಯಾಯ, ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ಅಂಬಲಪಾಡಿ, ಪ್ಲಾನೆಟ್ ಮಾರ್ಸ್ ಅಧ್ಯಕ್ಷೆ ದೀಪ್ತಿ ಸುವರ್ಣ, ಉಪಾಧ್ಯಕ್ಷ ಹರೀಶ್ ಕೋಟ್ಯಾನ್, ಕೋಶಾಧಿಕಾರಿ ರೋಸ್ಲಿನ್ ಕ್ರಾಸ್ತಾ ಮೊದಲಾದವರಿದ್ದರು.


ಗೀತಾ, ಸೌಜನ್ಯ ಮತ್ತು ಅನುಪ್ರಿಯಾ ಕಾರ್ಯಕ್ರಮ ನಿರೂಪಿಸಿದರು.