ಲೋಕಬಂಧು ನ್ಯೂಸ್ | ಸುಳ್ಯ, ಜೂ.20
ಮನೆ ಸಮೀಪದ ಕೆರೆಯ ಬಳಿ ಆಟವಾಡುತ್ತಿದ್ದ ಅವಳಿ ಮಕ್ಕಳು ಆಕಸ್ಮಿಕವಾಗಿ ಕೆರೆಗೆ ಬಿದ್ದು ಮೃತಪಟ್ಟ ಹೃದಯವಿದ್ರಾವಕ ಘಟನೆ ಸುಳ್ಯ ತಾಲೂಕಿನ ಮುರುಳ್ಯ ಗ್ರಾಮದ ಕಡೀರ ಎಂಬಲ್ಲಿ ಶನಿವಾರ ಸಂಜೆ ಸಂಭವಿಸಿದೆ.
ಮುರುಳ್ಯ ಗ್ರಾಮದ ಕಡೀರ ವಸಂತ ಹಾಗೂ ದಿವ್ಯ ದಂಪತಿಯ ಅವಳಿ ಮಕ್ಕಳಾದ ಯಶ್ವಿನ್ (5) ಮತ್ತು ಜಸ್ವಿತ್ (5) ಸುಮಾರು 15 ಅಡಿ ಆಳದ ಕೆರೆಗೆ ಕಾಲು ಜಾರಿ ಬಿದ್ದು ಮೃತಪಟ್ಟ ದುರ್ದೈವಿಗಳು.
ಮುರುಳ್ಯ ಶಾಂತಿನಗರ ಪ್ರಾಥಮಿಕ ಶಾಲೆಯಲ್ಲಿ ಯುಕೆಜಿಯಲ್ಲಿ ಕಲಿಯುತ್ತಿರುವ ಅವಳಿ ಮಕ್ಕಳಿಬ್ಬರೂ ಶಾಲೆ ಬಿಟ್ಟು ಮನೆಗೆ ಬಂದು ಆಟವಾಡುತ್ತ ಕೆರೆಯತ್ತ ಹೋಗಿದ್ದರು ಎನ್ನಲಾಗಿದೆ.
ವಸಂತ ಅವರು ವೆಲ್ಡಿಂಗ್ ಕೆಲಸ ಮಾಡುತ್ತಿದ್ದು, ದಿವ್ಯ ಕೂಲಿ ಕೆಲಸಕ್ಕೆ ತೆರಳಿದ್ದರು ಎನ್ನಲಾಗಿದ್ದು ಮನೆಯಲ್ಲಿ ಅಜ್ಜ ಮತ್ತು ಅಜ್ಜಿ ಮಾತ್ರ ಇದ್ದರು.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಸುಳ್ಯ ಅಗ್ನಿಶಾಮಕ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿ ನೀರಿನಿಂದ ಮಕ್ಕಳ ಶವಗಳನ್ನು ಮೇಲಕ್ಕೆತ್ತಿದ್ದಾರೆ.
ಬೆಳ್ಳಾರೆ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.