ಮಂಗಳೂರಿನಿಂದ ಕೊಲ್ಲೂರಿನತ್ತ ವಿಜಯ್ ಯಾತ್ರೆ

ಲೋಕಬಂಧು ನ್ಯೂಸ್ | ಮಂಗಳೂರು, ಜೂ.12
ತಮಿಳುನಾಡು ಮುಖ್ಯಮಂತ್ರಿ ಹಾಗೂ ಜನಪ್ರಿಯ ನಟ- ರಾಜಕಾರಣಿ ಜೋಸೆಫ್ ವಿಜಯ್ ಅವರು ಶುಕ್ರವಾರ ಮಧ್ಯಾಹ್ನ ವಿಶೇಷ ವಿಮಾನದ ಮೂಲಕ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.
ಮಧ್ಯಾಹ್ನ ಸುಮಾರು 1:40ರ ವೇಳೆಗೆ ದೆಹಲಿಯಿಂದ ಮಂಗಳೂರಿಗೆ ಬಂದಿಳಿದ ವಿಜಯ್ ಅವರನ್ನು ವಿಮಾನ ನಿಲ್ದಾಣದ ಅಧಿಕಾರಿಗಳು ಹಾಗೂ ಭದ್ರತಾ ಸಿಬ್ಬಂದಿ, ಸಾವಿರಾರು ಅಭಿಮಾನಿಗಳು ಉತ್ಸಾಹದಿಂದ ಬರಮಾಡಿಕೊಂಡರು.
ವಿಮಾನ ನಿಲ್ದಾಣದಲ್ಲಿ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್, ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಕೆ., ಉಪವಿಭಾಗಾಧಿಕಾರಿ ಮೀನಾಕ್ಷಿ ಆರ್ಯ ಸೇರಿದಂತೆ ಹಲವು ಅಧಿಕಾರಿಗಳು ವಿಜಯ್ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು.


ವಿಜಯ್ ಆಗಮನದ ಸುದ್ದಿ ತಿಳಿದಿದ್ದ ಅಭಿಮಾನಿಗಳು ಬೆಳಗ್ಗಿನಿಂದಲೇ ವಿಮಾನ ನಿಲ್ದಾಣದ ಸುತ್ತಮುತ್ತ ಜಮಾಯಿಸಿದ್ದರು. ವಿಮಾನ ನಿಲ್ದಾಣದ ಹೊರಭಾಗದಲ್ಲಿ ಯುವಕರು, ವಿದ್ಯಾರ್ಥಿಗಳು ಹಾಗೂ ಟಿವಿಕೆ (ತಮಿಳಗ ವೆಟ್ರಿ ಕಳಗಂ) ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ತಮ್ಮ ನಾಯಕನನ್ನು ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದರು.


ಅಧಿಕೃತ ಸ್ವಾಗತದ ಬಳಿಕ ವಿಜಯ್ ವಿಮಾನ ನಿಲ್ದಾಣದಿಂದ ಹೊರಬಂದ ಕ್ಷಣ ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟಿತು. ನೆರೆದಿದ್ದ ಅಭಿಮಾನಿಗಳು ಶಿಳ್ಳೆ, ಚಪ್ಪಾಳೆಗಳ ಮೂಲಕ ಭರ್ಜರಿ ಸ್ವಾಗತ ಕೋರಿದರು. ವಿಜಯ್ ಪ್ರಯಾಣಿಸುತ್ತಿದ್ದ ವಾಹನದತ್ತ ಅಭಿಮಾನಿಗಳು ಮುಗಿಬಿದ್ದಿದ್ದು, ಹಲವರು ಪಕ್ಷದ ಧ್ವಜಗಳನ್ನು ಬೀಸುತ್ತಾ ಘೋಷಣೆಗಳನ್ನು ಕೂಗಿದರು. ಭದ್ರತಾ ಸಿಬ್ಬಂದಿ ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ನಿರತರಾಗಿದ್ದರು.


ಅಭಿಮಾನಿಗಳ ಅಪಾರ ಪ್ರೀತಿಗೆ ಪ್ರತಿಕ್ರಿಯಿಸಿದ ವಿಜಯ್ ನಗುಮುಖದೊಂದಿಗೆ ಕೈಬೀಸಿ ಶುಭಾಶಯ ಕೋರಿದರು. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.


ಬಳಿಕ ಕಠಿಣ ಭದ್ರತೆಯ ನಡುವೆ ರಸ್ತೆ ಮಾರ್ಗವಾಗಿ ವಿಜಯ್ ಅವರು ಉಡುಪಿ ಜಿಲ್ಲೆಯ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದತ್ತ ಪ್ರಯಾಣ ಬೆಳೆಸಿದರು.