ಲೋಕಬಂಧು ನ್ಯೂಸ್ | ಮಣಿಪಾಲ, ಜೂ.19
ದೇಶಾದ್ಯಂತ ಉದ್ಯೋಗ ಸೃಷ್ಟಿಗೆ ವೇಗ ನೀಡಲು, ವಿಶೇಷವಾಗಿ ಉತ್ಪಾದನಾ ಕ್ಷೇತ್ರದಲ್ಲಿ ಉದ್ಯೋಗಾರ್ಹತೆ ಹೆಚ್ಚಿಸಲು ಮತ್ತು ವಿವಿಧ ವಲಯಗಳಲ್ಲಿ ಸಾಮಾಜಿಕ ಭದ್ರತೆಯ ವ್ಯಾಪ್ತಿಯನ್ನು ವಿಸ್ತರಿಸುವ ಉದ್ದೇಶ ಹೊಂದಿರುವ ಪ್ರಧಾನಮಂತ್ರಿ ವಿಕಸಿತ ಭಾರತ ರೋಜಗಾರ್ ಯೋಜನೆಯಡಿ ಈಗಾಗಲೇ ದೇಶಾದ್ಯಂತ 15 ಲಕ್ಷ ಉದ್ಯೋಗಾವಕಾಶಗಳ ಸೃಷ್ಟಿಗೆ ಬೆಂಬಲ ನೀಡಿದೆ. ತನ್ನ ಮತ್ತು ನಾಳಿನ ಸಮಾಜದ ಭವಿಷ್ಯಕ್ಕಾಗಿ ದುಡಿಯುತ್ತಿರುವ ಕಾರ್ಮಿಕರ ಭದ್ರತೆಗೆ ಪ್ರಥಮ ಪ್ರಾಶಸ್ತ್ಯ ನೀಡುವ ದೃಷ್ಟಿಯಿಂದ ಈ ಯೋಜನೆ ಜಾರಿಗೊಳಿಸಲಾಗಿದ್ದು ಒಟ್ಟು 99,446 ಕೋ. ರೂ ವೆಚ್ಚದ ಈ ಯೋಜನೆ ಎರಡು ವರ್ಷಗಳ ಅವಧಿಯಲ್ಲಿ 3.5 ಕೋಟಿಗೂ ಹೆಚ್ಚು ಉದ್ಯೋಗ ಸೃಷ್ಟಿಗೆ ಪ್ರೋತ್ಸಾಹ ನೀಡುವ ಗುರಿ ಹೊಂದಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಪ್ರಧಾನಮಂತ್ರಿ ವಿಕಸಿತ ಭಾರತ ರೋಜಗಾರ್ ಯೋಜನೆಯಡಿ ಪ್ರೋತ್ಸಾಹಧನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
145 ಕೋಟಿ ಜನಸಂಖ್ಯೆಯ ಭಾರತದಲ್ಲಿ ಅಂಕಿಆಂಶಗಳ ಪ್ರಕಾರ 42 ಕೋಟಿ ಅಸಂಘಟಿತ ಕಾರ್ಮಿಕರಿದ್ದಾರೆ. ವಿವಿಧ ವೃತ್ತಿಗಳಲ್ಲಿರುವ 29 ಕೋಟಿ ಕಾರ್ಮಿಕರು ಇ-ಶ್ರಮ್ ಪೋರ್ಟಲ್'ನಲ್ಲಿ ನೋಂದಾಯಿಸಲ್ಪಟ್ಟಿದ್ದಾರೆ. ಕೇಂದ್ರ ಮತ್ತು ರಾಜ್ಯದ ಕಾರ್ಮಿಕ ಇಲಾಖೆಗಳು ಸಂಘಟಿತ ಮತ್ತು ಅಸಂಘಟಿತ ಕ್ಷೇತ್ರದಲ್ಲಿ ದುಡಿಯುವ ಎಲ್ಲ ಕಾರ್ಮಿಕರಿಗೆ ಭದ್ರತೆ ನೀಡಲು ಬದ್ದವಾಗಿದೆ. ಪ್ರಧಾನಮಂತ್ರಿ ವಿಕಸಿತ ಭಾರತ ರೋಜಗಾರ್ ಯೋಜನೆಯಡಿ ಕಾರ್ಮಿಕರು ಮತ್ತು ಉದ್ಯೋಗದಾತರು ಇಬ್ಬರೂ ದೇಶದ ಆರ್ಥಿಕತೆಯನ್ನು ಪ್ರೋತ್ಸಾಹಿಸಿ ವಿಕಸಿತ ಭಾರತದ ಕನಸನ್ನು ನನಸಾಗಿಸುತ್ತಿದ್ದಾರೆ.
ಜಿಲ್ಲೆಯಲ್ಲಿ ಯೋಜನೆಯ ಭಾಗ (ಎ)ಯಲ್ಲಿ 774 ಉದ್ಯೋಗಿಗಳಿಗೆ 48,58,475 ರೂ.ವರೆಗೆ ಪ್ರೋತ್ಸಾಹಧನ ಹಾಗೂ ಭಾಗ (ಬಿ)ಯಲ್ಲಿ 199 ಸಂಸ್ಥೆಗಳು 3.18 ಕೋಟಿ ರೂಗಳ ಪ್ರೋತ್ಸಾಹಧನ ನಗದೀಕರಿಸಿಕೊಂಡಿವೆ. ಆತ್ಮನಿರ್ಭರ ಭಾರತವನ್ನು ರೂಪಿಸುತ್ತಿರುವ ದುಡಿಯುವ ಕೈಗಳಿಗೆ ಈ ಯೋಜನೆ ಶಕ್ತಿ ತುಂಬಲಿದೆ. ಆತ್ಮನಿರ್ಭರತೆಯೊಂದಿಗೆ ವಿಕಸಿತ ಭಾರತ ಎಲ್ಲ ರಂಗಗಳಲ್ಲೂ ಪ್ರಥಮ ರಾಷ್ಟ್ರವಾಗಿ ರೂಪುಗೊಳ್ಳಬೇಕು ಎಂದು ಕೋಟ ಆಶಿಸಿದರು.
ಪ್ರಸ್ತುತ 18 ಸಾವಿರದಿಂದ 30 ಸಾವಿರ ರೂ. ವರೆಗಿನ ವೇತನ ಹೊಂದಿದವರಿಗೆ ಮಾತ್ರ ಇ.ಎಸ್.ಐ ಸೌಲಭ್ಯ ದೊರೆಯುತ್ತಿದೆ. ಆದರೆ, ಅದನ್ನು 30 ಸಾವಿರ ವೇತನ ಹೊಂದಿದ ಉದ್ಯೋಗಿಗಳಿಗೂ ವಿಸ್ತರಿಸಬೇಕು ಎಂದು ಕೇಂದ್ರ ಕಾರ್ಮಿಕ ಇಲಾಖೆಗೆ ಮನವಿ ಮಾಡಲಾಗಿದೆ. 19 ಕೋಟಿ ಕಾರ್ಮಿಕರು ಈ ಯೋಜನೆಯ ಸೌಲಭ್ಯ ಪಡೆಯುತ್ತಿದ್ದು ಯೋಜನೆ ವಿಸ್ತರಣೆಗೊಂಡಲ್ಲಿ ಇನ್ನೂ ಹೆಚ್ಚಿನ ಜನರಿಗೆ ಸೌಲಭ್ಯ ದೊರೆಯಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಯಶಪಾಲ್ ಸುವರ್ಣ ಮಾತನಾಡಿ, ನರೇಂದ್ರ ಮೋದಿ ದೇಶದ ನೇತೃತ್ವ ವಹಿಸಿದ ಬಳಿಕ ದೇಶದಲ್ಲಿ ಹಲವು ಮಹತ್ತರ ಬದಲಾವಣೆಗಳಾಗಿವೆ. ಅಂದಾಜು 1.92 ಕೋಟಿ ಫಲಾನುಭವಿಗಳು ಈ ಯೋಜನೆಯಡಿ ಮೊದಲ ಬಾರಿಗೆ ಉದ್ಯೋಗ ಕ್ಷೇತ್ರಕ್ಕೆ ಪ್ರವೇಶಿಸುತ್ತಿದ್ದಾರೆ. ಉದ್ಯೋಗಾಕಾಂಕ್ಷಿ ಯುವಕ ಮತ್ತು ಯುವತಿಯರಿಗೆ ಅದರಿಂದ ಪ್ರಯೋಜನ ಸಿಗಲಿದೆ. ಮೊದಲ ಬಾರಿಗೆ ಉದ್ಯೋಗಕ್ಕೆ ಸೇರುವ ಉದ್ಯೋಗಿಗಳು ಮೊದಲನೆ ತಿಂಗಳು 15 ಸಾವಿರ ರೂ.ವರೆಗೆ ಪ್ರೋತ್ಸಾಹಧನ ಪಡೆದರೆ, ಹೆಚ್ಚುವರಿ ಉದ್ಯೋಗ ಸೃಷ್ಟಿಸುವ ಉದ್ಯೋಗದಾತರು ಪ್ರತೀ ಹೆಚ್ಚುವರಿ ಉದ್ಯೋಗಿಗೆ ತಿಂಗಳಿಗೆ 3 ಸಾವಿರ ರೂ. ವರೆಗೆ ಪ್ರೋತ್ಸಾಹಧನ ಪಡೆಯುತ್ತಾರೆ. ಇಂಥ ಪ್ರಯತ್ನ ದೇಶದಲ್ಲೇ ಪ್ರಥಮ ಬಾರಿಗೆ ನಡೆಯುತ್ತಿದೆ.
ಉದ್ಯೋಗಿಗಳು ಮತ್ತು ಉದ್ಯೋಗದಾತರು ಇಬ್ಬರನ್ನೂ ಬೆಂಬಲಿಸುವ ಮೂಲಕ ಈ ಯೋಜನೆ ಔಪಚಾರಿಕ ಉದ್ಯೋಗ ವಿಸ್ತರಿಸಿ, ಸಾಮಾಜಿಕ ಭದ್ರತೆಯ ವ್ಯಾಪ್ತಿಯನ್ನು ಬಲಪಡಿಸಿ ವಿಕಸಿತ ಭಾರತಕ್ಕೆ ಸಹಕಾರಿಯಾಗಲಿದೆ. ಅಧಿಕಾರಿಗಳು ಪ್ರಾಮಾಣಿಕತೆಯಿಂದ ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿದಲ್ಲಿ ಯೋಜನೆ ಸಫಲತೆ ಪಡೆಯಲಿದೆ ಎಂದರು.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯ್ಕ್, ಇ.ಪಿ.ಎಫ್.ಒ ಪ್ರಾದೇಶಿಕ ಆಯುಕ್ತ ಶಶಿಕಾಂತ್ ದಹಿಯಾ, ಕೆನರಾ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಎಚ್.ಕೆ ಗಂಗಾಧರ್ ಮೊದಲಾದವರಿದ್ದರು.
ನೀತಾ ಉದಯಶಂಕರ್ ಮತ್ತು ಜಯಶ್ರೀ ನಿರೂಪಿಸಿ, ವನಿತಾ ನಾಯ್ಕ್ ವಂದಿಸಿದರು.
ಇದೇ ಸಂದರ್ಭದಲ್ಲಿ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ವಿಕಸಿತ ಭಾರತ ರೋಜಗಾರ್ ಯೋಜನೆಯಡಿ ಸುಮಾರು 2,400 ಕೋಟಿ ರೂ ಮೌಲ್ಯದ ಪ್ರೋತ್ಸಾಹಧನವನ್ನು ಫಲಾನುಭವಿಗಳಿಗೆ ವಿತರಿಸಿದರು.