ಲೋಕಬಂಧು ನ್ಯೂಸ್ ಉಜಿರೆ, ಜೂ.21
ನಮ್ಮ ಸನಾತನ ಸಂಸ್ಕೃತಿ ಮತ್ತು ಪರಂಪರೆಯೊಂದಿಗೆ ವಿಶ್ವಕ್ಕೆ ಭಾರತ ನೀಡಿದ ಅಮೂಲ್ಯ ಕೊಡುಗೆ 'ಯೋಗ' ಆಗಿದ್ದು ಜಾಗತಿಕ ಮಟ್ಟದಲ್ಲಿ ಇದಕ್ಕೆ ಹೆಚ್ಚಿನ ಪ್ರಚಾರ ಅಗತ್ಯವಿದೆ ಎಂದು ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಹೇಳಿದರು.ಭಾನುವಾರ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ 12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಉದ್ಘಾಟನ ಸಮಾರಂಭದಲ್ಲಿ ಶುಭಾಶಂಸನೆಗೈದರು.
ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಕಾರ್ಯಕ್ರಮ ಉದ್ಘಾಟಿಸಿ, ಶುಭ ಹಾರೈಸಿದರು.
ನಮ್ಮ ಪಂಚೇಂದ್ರಿಯಗಳ ನಿಯಂತ್ರಣದೊಂದಿಗೆ ದೈಹಿಕ ಹಾಗೂ ಮಾನಸಿಕ ಆರೋಗ್ಯ ರಕ್ಷಣೆಗೆ ಯೋಗ ಸಹಕಾರಿ. ಆಧುನಿಕ ಜೀವನಶೈಲಿ, ಆಹಾರ- ವಿಹಾರ ವಿಧಾನದಿಂದಾಗಿ ನಾವು ಅನೇಕ ಒತ್ತಡಗಳಿಗೆ ಒಳಗಾಗುತ್ತಿದ್ದು ಸುಖ-ಶಾಂತಿ, ನೆಮ್ಮದಿಯ ಜೀವನಕ್ಕೆ ಯೋಗ ಬೇಕಾಗಿದೆ.
ಜಾಗತಿಕ ಮಟ್ಟದಲ್ಲಿ ಯೋಗಕ್ಕೆ ಪ್ರಚಾರ ನೀಡುವಲ್ಲಿ ಪ್ರಧಾನಿ ನರೇಂದ್ರ ಮೋದಿ ಅಮೂಲ್ಯ ಕೊಡುಗೆ ನೀಡಿದ್ದಾರೆ ಎಂದರು.
ರಾಜೀವ್ ಗಾಂಧಿ ಆರೋಗ್ಯ ವಿ.ವಿ. ಉಪಕುಲಪತಿ ಡಾ. ಭಗವಾನ್ ಬಿ.ಸಿ. ಆನ್‌ಲೈನ್ ಮೂಲಕ ಸಂದೇಶ ನೀಡಿ, ಯೋಗಾಭ್ಯಾಸ ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಬೇಕು ಎಂದು ಸಲಹೆ ನೀಡಿದರು.
ರಾಜೀವ್‌ಗಾಂಧಿ ಆರೋಗ್ಯ ವಿ.ವಿ.ಯ 400 ಕಾಲೇಜುಗಳಲ್ಲಿ 15 ಸಾವಿರ ವಿದ್ಯಾರ್ಥಿಗಳು ಯೋಗಾಭ್ಯಾಸ ಮಾಡುತ್ತಿದ್ದಾರೆ ಎಂದವರು ಹೇಳಿದರು.
ರಾಜೀವ್ ಗಾಂಧಿ ಆರೋಗ್ಯ ವಿ.ವಿ. ಪಠ್ಯಕ್ರಮ ಅಭಿವೃದ್ಧಿ ಕೇಂದ್ರದ ಪ್ರಭಾರ ನಿರ್ದೇಶಕ ಡಾ. ಷಣ್ಮುಖಪ್ಪ ಮಾತನಾಡಿ, ಉಜಿರೆಯ ಎಸ್.ಡಿ.ಎಂ. ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜು ಆಶ್ರಯದಲ್ಲಿ ವರ್ಷಕ್ಕೊಂದು ಗ್ರಾಮವನ್ನು ದತ್ತು ತೆಗೆದುಕೊಂಡು ಗ್ರಾಮೀಣ ಪ್ರದೇಶದ ಜನರಿಗೆ ಯೋಗಾಭ್ಯಾಸದ ತರಬೇತಿ ನೀಡಬೇಕು ಎಂದು ಸಲಹೆ ನೀಡಿದರು.
ರಾಜ್ಯದಲ್ಲಿ 18 ಯೋಗ ವಿಜ್ಞಾನ ಮತ್ತು ಪ್ರಕೃತಿ ಚಿಕಿತ್ಸಾ ಪದವಿ ಕಾಲೇಜುಗಳಿದ್ದು ಉಜಿರೆ ಕಾಲೇಜು ಮತ್ತು ಶಾಂತಿವನ ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯ ಸೇವೆ ಮತ್ತು ಸಾಧನೆಗೆ ಅಭಿನಂದಿಸಿದರು.
ಉಜಿರೆ ಕಾಲೇಜಿನಲ್ಲಿ ಅನಸ್ತೇಶಿಯಾ ಮತ್ತು ಅಕ್ಯುಪಂಕ್ಚರ್‌ನಲ್ಲಿ ಸ್ನಾತಕೋತ್ತರ ಪದವಿ ತರಗತಿಗಳಿಗೆ ಅನುಮತಿ ಕೋರಿದ್ದು ಸದ್ಯದಲ್ಲೇ ಅನುಮೋದನೆ ನೀಡಲಾಗುವುದು ಎಂದವರು ಭರವಸೆ ನೀಡಿದರು.
ಜೂನ್ 21ಅತೀ ದೀರ್ಘವಾದ ಹಗಲು ಇರುವುದರಿಂದ ವಿಶ್ವದೆಲ್ಲೆಡೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಸಲಾಗುತ್ತದೆ ಎಂದರು.
ಬೆಂಗಳೂರಿನ ಚಿನ್ಮಯಿ ಅವರಿಗೆ 'ಯೋಗರತ್ನ' ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಾಮೂಹಿಕ ಯೋಗ ಪ್ರದರ್ಶನ ನಡೆಸಲಾಯಿತು.
ಶಾಂತಿವನ ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಶಿವಪ್ರಸಾದ ಶೆಟ್ಟಿ ವರದಿ ಸಾದರಪಡಿಸಿ ಶಾಲಾ- ಕಾಲೇಜುಗಳಲ್ಲಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಯೋಗ ಶಿಬಿರ ನಡೆಸಿ ಆರೋಗ್ಯ ರಕ್ಷಣೆ ಬಗ್ಗೆ ಅರಿವು, ಜಾಗೃತಿ ಮೂಡಿಸಲಾಗುತ್ತದೆ ಎಂದರು.
ಎಸ್.ಡಿ.ಎಂ ಯೋಗ ವಿಜ್ಞಾನ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಶಾಂತ ಶೆಟ್ಟಿ ಸ್ವಾಗತಿಸಿ, ಉಪಪ್ರಾಂಶುಪಾಲೆ ಡಾ. ಸುಜಾತ ಕೆ.ಜೆ. ವಂದಿಸಿರು.
ಡಾ.ಅನನ್ಯ ನಿರ್ವಹಿಸಿದರು