ದೇಶ- ಸಂಸ್ಕೃತಿಯನ್ನು ಬೆಸೆಯುವ ಯೋಗ

ಲೋಕಬಂಧು ನ್ಯೂಸ್ ಕೋಲ್ಕತಾ, ಜೂ.21
ಪ್ರತಿವರ್ಷ ಜೂ.21ರಂದು ಆಚರಿಸಲಾಗುವ ಯೋಗ ದಿನ ವಿಶ್ವದ ಅತಿದೊಡ್ಡ ಸಾಮೂಹಿಕ ಆಚರಣೆಗಳಲ್ಲಿ ಒಂದಾಗಿ ಬೆಳೆದಿದ್ದು, ವಿವಿಧ ದೇಶಗಳು ಮತ್ತು ಸಂಸ್ಕೃತಿಗಳ ಜನರನ್ನು ಯೋಗದ ಮೂಲಕ ಒಂದಾಗಿಸುತ್ತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು.
ಇಲ್ಲಿನ ಐತಿಹಾಸಿಕ ರೆಡ್ ರೋಡ್‌ನಲ್ಲಿ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಮಾತನಾಡಿದ ಅವರು, ವಿಶ್ವದ ಜನತೆಗೆ ಅಂತರರಾಷ್ಟ್ರೀಯ ಯೋಗ ದಿನದ ಶುಭಾಶಯ ಕೋರಿದರು.


ಹಿಮಾಲಯದಿಂದ ಹಿಂದೂ ಮಹಾಸಾಗರದ ವರೆಗೆ ಹಾಗೂ ಬಂಗಾಳದಿಂದ ಸೌರಾಷ್ಟ್ರದ ವರೆಗೆ ಇಡೀ ಭಾರತ ಯೋಗದ ಶಕ್ತಿ ಮತ್ತು ಸ್ಫೂರ್ತಿಯಿಂದ ತುಂಬಿದೆ. ಯೋಗ ವ್ಯಕ್ತಿಗಳು, ಸಮಾಜಗಳು ಮತ್ತು ರಾಷ್ಟ್ರಗಳನ್ನು ಬೆಸೆಯುವ ವಿಶಿಷ್ಟ ಸಾಮರ್ಥ್ಯ ಹೊಂದಿದ್ದು, ಮಾನವೀಯ ಏಕತೆಯನ್ನು ಬಲಪಡಿಸುತ್ತಿದೆ ಎಂದರು.


ಪಶ್ಚಿಮ ಬಂಗಾಳದ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಉಲ್ಲೇಖಿಸಿದ ಪ್ರಧಾನಿ, ಸ್ವಾಮಿ ವಿವೇಕಾನಂದ ಹಾಗೂ ಅರಬಿಂದೋ ಅವರಂಥ ಮಹನೀಯರ ಕೊಡುಗೆಯನ್ನು ಸ್ಮರಿಸಿದರು.


ಮನಸ್ಸು, ದೇಹ ಮತ್ತು ಆತ್ಮದ ಸಮನ್ವಯವನ್ನು ಒತ್ತಿಹೇಳುವ ಸಂಪ್ರದಾಯವನ್ನು ಬಂಗಾಳ ದೀರ್ಘಕಾಲದಿಂದ ಪೋಷಿಸಿಕೊಂಡು ಬಂದಿದೆ ಎಂದರು.


2026ರ ಯೋಗ ದಿನದ ಘೋಷವಾಕ್ಯವಾದ ‘ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ’ದ ಮಹತ್ವವನ್ನು ವಿವರಿಸಿದ ಮೋದಿ, ಯೋಗ ಕೇವಲ ದೈಹಿಕ ವ್ಯಾಯಾಮವಲ್ಲ; ಜೀವನದ ಪ್ರತಿಯೊಂದು ಹಂತದಲ್ಲೂ ಆರೋಗ್ಯ, ಚೈತನ್ಯ ಮತ್ತು ಮಾನಸಿಕ ಸಮತೋಲನವನ್ನು ಕಾಪಾಡುವ ಸಮಗ್ರ ಜೀವನ ವಿಧಾನ. ವಯಸ್ಸಾದಂತೆ ಆರೋಗ್ಯಕರ, ಸಕ್ರಿಯ ಮತ್ತು ಶಕ್ತಿಯುತ ಜೀವನ ನಡೆಸಲು ಯೋಗ ನೆರವಾಗುತ್ತದೆ ಎಂದರು.ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ವಿವಿಧ ಭಂಗಿಯ ಯೋಗಾಸನ ಮಾಡಿದರು.ಕಾರ್ಯಕ್ರಮದಲ್ಲಿ ದೇಶ-ವಿದೇಶಗಳ ಲಕ್ಷಾಂತರ ಜನರು ಪಾಲ್ಗೊಂಡಿದ್ದರು. ಪಶ್ಚಿಮ ಬಂಗಾಳದ ರಾಜ್ಯಪಾಲ ಆರ್‌.ಎನ್‌. ರವಿ, ವಿಧಾನಸಭೆಯ ಪ್ರತಿಪಕ್ಷ ನಾಯಕ ಸುವೇಂದು ಅಧಿಕಾರಿ, ಕೇಂದ್ರ ಆಯುಷ್ ಖಾತೆ ರಾಜ್ಯ ಸಚಿವ ಪ್ರತಾಪ್‌ರಾವ್ ಜಾಧವ್ ಸೇರಿದಂತೆ ಹಲವರು ಭಾಗಿಯಾಗಿದ್ದರು.