ರಾಜ್ಯ ಪೊಲೀಸ್ ಇಲಾಖೆಗೆ 107 ವಾಹನಗಳ ಶಕ್ತಿ

ಲೋಕಬಂಧು ನ್ಯೂಸ್ ಬೆಂಗಳೂರು, ಜು.11
ಗಡಿಯಲ್ಲಿ ದೇಶ ರಕ್ಷಿಸುವ ಸೈನಿಕ ಮತ್ತು ಗಡಿಯೊಳಗೆ ಕಾನೂನು ಸುವ್ಯವಸ್ಥೆ ಕಾಪಾಡುವ ಆರಕ್ಷಕ ಈ ಇಬ್ಬರಿಂದಲೇ ರಾಜ್ಯ ಮತ್ತು ದೇಶದಲ್ಲಿ ನೆಮ್ಮದಿ ನೆಲೆಸಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.ಶನಿವಾರ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮುಂಭಾಗದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.


ಈ ಸಂದರ್ಭದಲ್ಲಿ ರಾಜ್ಯದ ವಿವಿಧ ಜಿಲ್ಲಾ ಪೊಲೀಸ್ ಘಟಕಗಳಿಗೆ 32 ಅತ್ಯಾಧುನಿಕ ಮೊಬೈಲ್ ಫೋರೆನ್ಸಿಕ್ ವ್ಯಾನ್‌ಗಳು ಹಾಗೂ 75 ಬೊಲೆರೋ ವಾಹನಗಳನ್ನು ಹಸ್ತಾಂತರಿಸಿದರು.


ಪೊಲೀಸರಿಗೆ ಹೊಸ ಶಕ್ತಿ
ಹೊಸ ವಾಹನಗಳ ಸೇರ್ಪಡೆಯಿಂದ ಪೊಲೀಸ್ ಇಲಾಖೆಯ ಕಾರ್ಯಕ್ಷಮತೆ ಮತ್ತಷ್ಟು ಹೆಚ್ಚಲಿದ್ದು, ಅಪರಾಧ ಪತ್ತೆ ಮತ್ತು ತನಿಖಾ ಕಾರ್ಯಗಳಿಗೆ ಹೆಚ್ಚಿನ ನೆರವು ದೊರೆಯಲಿದೆ. ಪೊಲೀಸ್ ಇಲಾಖೆಗೆ ಈ ವಾಹನಗಳನ್ನು ನೀಡುತ್ತಿರುವುದರಿಂದ ಹೊಸ ಶಕ್ತಿ ತುಂಬಿದಂತಾಗಿದೆ. ಅವುಗಳಿಂದ ಅಪರಾಧಿಗಳನ್ನು ಪತ್ತೆಹಚ್ಚಲು ಹಾಗೂ ತನಿಖೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಡೆಸಲು ಅನುಕೂಲವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.


ಡ್ರಗ್ ಜಾಲದ ವಿರುದ್ಧ ಪೊಲೀಸರ ಸಾಧನೆ
ಮಾದಕ ವಸ್ತುಗಳ ವಿರುದ್ಧ ಕರ್ನಾಟಕ ಪೊಲೀಸರು ನಡೆಸುತ್ತಿರುವ ಕಾರ್ಯಾಚರಣೆಯನ್ನು ಶ್ಲಾಘಿಸಿದ ಮುಖ್ಯಮಂತ್ರಿ, ಸಾವಿರಾರು ಡ್ರಗ್ ಪೆಡ್ಲರ್‌ಗಳನ್ನು ಬಂಧಿಸುವ ಮೂಲಕ ಕರ್ನಾಟಕ ಪೊಲೀಸ್ ಇಲಾಖೆ ದೊಡ್ಡ ಸಾಧನೆ ಮಾಡಿದೆ. ಇದು ದಾಖಲೆಯ ಸಾಧನೆಯಾಗಿದ್ದು, ಪೊಲೀಸ್ ಅಧಿಕಾರಿಗಳ ಸಾಮರ್ಥ್ಯವನ್ನು ಇಡೀ ದೇಶವೇ ಕೊಂಡಾಡುತ್ತಿದೆ ಎಂದರು.


ಜನರ ವಿಶ್ವಾಸ ಗಳಿಸಿ
ಪೊಲೀಸ್ ಅಧಿಕಾರಿಗಳು ತಮ್ಮ ದಕ್ಷತೆ, ನಿಷ್ಠೆ ಹಾಗೂ ಕಾರ್ಯಪಟುತ್ವದಿಂದ ರಾಜ್ಯಕ್ಕೆ ಉತ್ತಮ ಹೆಸರು ತಂದಿದ್ದಾರೆ. ಹಗಲು-ರಾತ್ರಿ ಶ್ರಮಿಸುತ್ತಿರುವ ಪೊಲೀಸ್ ಸಿಬ್ಬಂದಿ ಪರವಾಗಿ ಸರ್ಕಾರ ಸದಾ ನಿಲ್ಲಲಿದೆ ಎಂದು ಭರವಸೆ ನೀಡಿದರು.


ಜನರಿಗೆ ನಿಮ್ಮ ಮೇಲೆ ವಿಶ್ವಾಸ ಮೂಡುವ ರೀತಿಯಲ್ಲಿ ಕೆಲಸ ಮಾಡಿ. ಪೊಲೀಸ್ ಇಲಾಖೆ ಜನಸ್ನೇಹಿ ಮತ್ತು ಪರಿಣಾಮಕಾರಿ ಆಡಳಿತದ ಮೂಲಕ ಮತ್ತಷ್ಟು ವಿಶ್ವಾಸ ಗಳಿಸಬೇಕು ಎಂದರು.


ಗೃಹ ಸಚಿವ ಪ್ರಿಯಾಂಕ್ ಖರ್ಗೆ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕ ರಿಜ್ವಾನ್ ಅರ್ಷದ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.