ಲೋಕಬಂಧು ನ್ಯೂಸ್ | ಉಡುಪಿ, ಜು.11
ಉಡುಪಿ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ಹಾಗೂ ಟ್ರ್ಯಾಕ್ ಆ್ಯಂಡ್ ಫೀಲ್ಡ್ ಕ್ಲಬ್ ಉಡುಪಿ ಸಂಯುಕ್ತ ಆಶ್ರಯದಲ್ಲಿ ಉಡುಪಿ ಜಿಲ್ಲಾ ಕಿರಿಯರ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಆಗಸ್ಟ್ 1 ಮತ್ತು 2ರಂದು ಅಜ್ಜರಕಾಡು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಉಡುಪಿ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ಅಧ್ಯಕ್ಷ ಹರಿಪ್ರಸಾದ್ ರೈ ಮಣಿಪಾಲ ತಿಳಿಸಿದ್ದಾರೆ.
ಈ ಚಾಂಪಿಯನ್‌ಶಿಪ್ ಕರ್ನಾಟಕ ಕಿರಿಯರ ರಾಜ್ಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ 2026ಕ್ಕೆ ಉಡುಪಿ ಜಿಲ್ಲೆಯನ್ನು ಪ್ರತಿನಿಧಿಸುವ ಅಥ್ಲೀಟ್‌ಗಳ ಆಯ್ಕೆಯ ಸ್ಪರ್ಧೆಯಾಗಿ ನಡೆಯಲಿದ್ದು, ಜಿಲ್ಲೆಯ ಪ್ರತಿಭಾವಂತ ಕ್ರೀಡಾಪಟುಗಳಿಗೆ ರಾಜ್ಯ ಮಟ್ಟದಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಉತ್ತಮ ಅವಕಾಶವನ್ನು ಒದಗಿಸುತ್ತದೆ.ಸ್ಪರ್ಧೆಗಳು 14 ವರ್ಷದೊಳಗಿನ (ಯು-14), 16 ವರ್ಷದೊಳಗಿನ (ಯು-16), 18 ವರ್ಷದೊಳಗಿನ (ಯು-18) ಹಾಗೂ 20 ವರ್ಷದೊಳಗಿನ (ಯು-20) ವಿಭಾಗಗಳಲ್ಲಿ ನಡೆಯಲಿವೆ. ಉಡುಪಿ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳು, ಕ್ರೀಡಾ ಕ್ಲಬ್‌ಗಳು, ಸಂಯೋಜಿತ ಘಟಕಗಳು ಹಾಗೂ ಅರ್ಹ ವೈಯಕ್ತಿಕ ಅಥ್ಲೀಟ್‌ಗಳು ಸ್ಪರ್ಧೆಯಲ್ಲಿ ಭಾಗವಹಿಸಬಹುದು.
ಜುಲೈ 15ರಿಂದ ಆನ್‌ಲೈನ್ ನೋಂದಣಿ ಆರಂಭವಾಗಲಿದ್ದು, ಅರ್ಜಿ ಸಲ್ಲಿಸಲು ಜುಲೈ 31 ಕೊನೆಯ ದಿನ.
ಪ್ರತೀ ಅಥ್ಲೀಟ್‌ಗೆ 250 ರೂ. ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ನೋಂದಣಿಗಳನ್ನು ಅಧಿಕೃತ ಆನ್‌ಲೈನ್ ಪೋರ್ಟಲ್ ಮೂಲಕ ಮಾತ್ರ ಸ್ವೀಕರಿಸಲಾಗುವುದು. ಇ-ಮೇಲ್, ವಾಟ್ಸಾಪ್, ಕೈಬರಹ ಹಾಗೂ ಸ್ಥಳದಲ್ಲೇ ಸಲ್ಲಿಸುವ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಸ್ವೀಕರಿಸಲಾಗುವುದಿಲ್ಲ.
ಕರ್ನಾಟಕ ಕಿರಿಯರ ರಾಜ್ಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗೆ ಆಯ್ಕೆಯಾಗಲು ಬಯಸುವ ಅಥ್ಲೀಟ್‌ಗಳು ಅಧಿಕೃತ ಎಎಫ್ಐ ಯುಐಡಿ ಸಂಖ್ಯೆ ಹೊಂದಿರುವುದು ಕಡ್ಡಾಯ. ಸ್ಪರ್ಧೆಯಲ್ಲಿ ಭಾಗವಹಿಸುವ ಮೊದಲು ವಯೋಮಿತಿ ಪರಿಶೀಲನೆಗಾಗಿ ಜನನ ಪ್ರಮಾಣಪತ್ರದ ಮೂಲಪ್ರತಿ ಅಥವಾ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿಯ ಮೂಲ ಪ್ರತಿಯನ್ನು ಸಲ್ಲಿಸಬೇಕು.
ಉಡುಪಿ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ಜಿಲ್ಲೆಯ ಎಲ್ಲಾ ಶಿಕ್ಷಣ ಸಂಸ್ಥೆಗಳು, ಕ್ರೀಡಾ ಕ್ಲಬ್‌ಗಳು, ಸಂಯೋಜಿತ ಘಟಕಗಳು, ತರಬೇತುದಾರರು, ಪೋಷಕರು ಹಾಗೂ ಅಥ್ಲೀಟ್‌ಗಳು ನಿಗದಿತ ಅವಧಿಯೊಳಗೆ ತಮ್ಮ ನೋಂದಣಿಯನ್ನು ಪೂರ್ಣಗೊಳಿಸಿ, ಈ ಚಾಂಪಿಯನ್‌ಶಿಪ್‌ನ್ನು ಯಶಸ್ವಿಗೊಳಿಸುವಲ್ಲಿ ಸಹಕರಿಸುವಂತೆ ಹರಿಪ್ರಸಾದ್ ರೈ ಮನವಿ ಮಾಡಿದ್ದಾರೆ.