ರೆಸಾರ್ಟ್‌ನಲ್ಲಿ ಜೂಜಾಟ: 26 ಮಂದಿಯ ಬಂಧನ; 1.31 ಲಕ್ಷ ವಶ

ಲೋಕಬಂಧು ನ್ಯೂಸ್ | ಹಿರಿಯಡಕ, ಜು.8
ಪೆರ್ಡೂರು ಗ್ರಾಮದ ಪುತ್ತಿಗೆ ಸ್ವರ್ಣ ಗ್ರೀನ್ ವ್ಯಾಲಿ ರೆಸಾರ್ಟ್‌ನಲ್ಲಿ ಅಕ್ರಮವಾಗಿ ಅಂದರ್-ಬಾಹರ್ ಜೂಜಾಟ ನಡೆಸುತ್ತಿದ್ದ ಆರೋಪದಡಿ 26 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಜುಲೈ 7ರಂದು ರಾತ್ರಿ ಖಚಿತ ಮಾಹಿತಿ ಮೇರೆಗೆ ಹಿರಿಯಡಕ ಪೊಲೀಸರು ರೆಸಾರ್ಟ್‌ನ ಕೊಠಡಿಗೆ ದಾಳಿ ನಡೆಸಿದ್ದು, ಜೂಜಾಟದಲ್ಲಿ ತೊಡಗಿದ್ದ 26 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.


ದಾಳಿ ವೇಳೆ ಜೂಜಾಟಕ್ಕೆ ಬಳಸಲಾಗುತ್ತಿದ್ದ 1 ಲಕ್ಷ 31 ಸಾವಿರದ 630 ರೂ‌ ನಗದು, ಇಸ್ಪೀಟ್ ಎಲೆಗಳು, ಅಂದಾಜು 2 ಲಕ್ಷ ಮೌಲ್ಯದ 25 ಮೊಬೈಲ್ ಫೋನ್‌ಗಳು, ಐದು ಕಾರುಗಳು, ಅಂದಾಜು 14.50 ಲಕ್ಷ ಮೌಲ್ಯದ ಮೂರು ಮೋಟಾರ್‌ಸೈಕಲ್‌ಗಳು ಹಾಗೂ ಜೂಜಾಟಕ್ಕೆ ಬಳಸುತ್ತಿದ್ದ ಟೇಬಲ್ ಮತ್ತು ಕುರ್ಚಿಗಳನ್ನು ಜಪ್ತಿ ಮಾಡಲಾಗಿದೆ. ಅದರ ಒಟ್ಟು ಮೌಲ್ಯ ಸುಮಾರು 17.81 ಲಕ್ಷ ಎಂದು ಅಂದಾಜಿಸಲಾಗಿದೆ.


ಹಿರಿಯಡಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.


ಅಲ್ಲದೆ, ಜೂಜಾಟಕ್ಕೆ ಅವಕಾಶ ಕಲ್ಪಿಸಿದ ಆರೋಪದ ಹಿನ್ನೆಲೆಯಲ್ಲಿ ಪುತ್ತಿಗೆ ಸ್ವರ್ಣ ಗ್ರೀನ್ ವ್ಯಾಲಿ ರೆಸಾರ್ಟ್‌ನ ಪರವಾನಿಗೆ ರದ್ದುಪಡಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.