ತೂಗುಸೇತುವೆಗಳ ಸರದಾರ ಬಾರದ ಲೋಕಕ್ಕೆ ಪಯಣ

ಲೋಕಬಂಧು ನ್ಯೂಸ್ | ಸುಳ್ಯ, ಜು.7
'ತೂಗುಸೇತುವೆಗಳ ಸರದಾರ' ಖ್ಯಾತಿಯ ಪದ್ಮಶ್ರೀ ಪುರಸ್ಕೃತ ಹಿರಿಯ ಸೇತುವೆ ತಜ್ಞ ಡಾ.ಗಿರೀಶ್ ಭಾರದ್ವಾಜ (76) ಮಂಗಳವಾರ ಮುಂಜಾನೆ ಇಲ್ಲಿನ ಕೆ.ವಿ.ಜಿ. ಆಸ್ಪತ್ರೆಯಲ್ಲಿ ಕೊನೆಯಿಸಿರೆಳೆದರು.
ಇತ್ತೀಚೆಗಷ್ಟೇ ಉತ್ತರ ಕನ್ನಡ ಜಿಲ್ಲೆಯ ದೇವಸ್ಥಾನಗಳಿಗೆ ಭೇಟಿ ನೀಡಿ ಮರಳಿದ್ದ ಅವರಿಗೆ, ಕಳೆದ ಕೆಲವು ದಿನಗಳಿಂದ ಹೃದಯ ಸಂಬಂಧಿ ಅನಾರೋಗ್ಯ ಕಾಣಿಸಿಕೊಂಡಿತ್ತು. ಹಾಗಾಗಿ ಚಿಕಿತ್ಸೆಗಾಗಿ ಕೆ.ವಿ.ಜಿ. ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು.


ಕಡಿಮೆ ವೆಚ್ಚದಲ್ಲಿ, ಪರಿಸರ ಸ್ನೇಹಿ ತೂಗುಸೇತುವೆಗಳ ನಿರ್ಮಾಣದ ಮೂಲಕ ದೇಶ-ವಿದೇಶಗಳಲ್ಲಿ ವಿಶಿಷ್ಟ ಹೆಗ್ಗಳಿಕೆ ಗಳಿಸಿದ್ದ ಡಾ.ಗಿರೀಶ್ ಭಾರದ್ವಾಜ ಅವರು, ಗ್ರಾಮೀಣ ಭಾಗದ ಜನತೆಗೆ ಸಂಪರ್ಕ ಕಲ್ಪಿಸುವ ನೂರಾರು ಸೇತುವೆಗಳನ್ನು ನಿರ್ಮಿಸಿ ಜನಮಾನಸದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ್ದರು.


ಅವರ ಈ ಅಪಾರ ಸಾಮಾಜಿಕ ಸೇವೆ ಹಾಗೂ ಎಂಜಿನಿಯರಿಂಗ್ ಕ್ಷೇತ್ರಕ್ಕೆ ಸಲ್ಲಿಸಿದ ಅಮೂಲ್ಯ ಕೊಡುಗೆಯನ್ನು ಗುರುತಿಸಿ ಭಾರತ ಸರ್ಕಾರ ಅವರಿಗೆ 'ಪದ್ಮಶ್ರೀ' ಪ್ರಶಸ್ತಿ ನೀಡಿ ಗೌರವಿಸಿತ್ತು.