ಲೋಕಬಂಧು ನ್ಯೂಸ್ | ಉಡುಪಿ, ಜು.4
ಭಾರತೀಯ ವೈದ್ಯಕೀಯ ಸಂಘ (ಐಎಂಎ) ಕರ್ನಾಟಕ ರಾಜ್ಯ ಶಾಖೆ ನೀಡುವ ರಾಜ್ಯ ಮಟ್ಟದ ವೈದ್ಯ ಚೇತನ ಪ್ರಶಸ್ತಿಯನ್ನು ಉಡುಪಿ ಆದರ್ಶ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಜಿ.ಎಸ್. ಚಂದ್ರಶೇಖರ್ ಅವರಿಗೆ ಬೆಂಗಳೂರಿನಲ್ಲಿ ಪ್ರದಾನ ಮಾಡಲಾಯಿತು.
ಬೆಂಗಳೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಆವರಣದ ಡಾ. ಬಸವರಾಜೇಂದ್ರ ಸಭಾಂಗಣದಲ್ಲಿ ಜು.1ರಂದು ನಡೆದ ವೈದ್ಯರ ದಿನಾಚರಣೆಯಲ್ಲಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಪ್ರಶಸ್ತಿ ಪ್ರದಾನ ಮಾಡಿದರು.
ಡಾ.ಜಿ.ಎಸ್.ಚಂದ್ರಶೇಖರ್ ಹಲವು ದಶಕಗಳಿಂದ ಉಡುಪಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗುಣಮಟ್ಟದ ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದು, ಸಾವಿರಾರು ರೋಗಿಗಳ ವಿಶ್ವಾಸ ಗಳಿಸಿದ್ದಾರೆ. ಅವರ ಮಾನವೀಯ ಸೇವೆ, ವೃತ್ತಿಪರ ಪ್ರಾಮಾಣಿಕತೆ ಹಾಗೂ ಸಮಾಜಮುಖಿ ಕಾರ್ಯಗಳನ್ನು ಗುರುತಿಸಿ ಪ್ರಶಸ್ತಿ ನೀಡಲಾಗಿದೆ.
ವೈದ್ಯಕೀಯ ಕ್ಷೇತ್ರದ ಅತ್ಯುತ್ತಮ ವೃತ್ತಿಪರ ಸಾಧನೆ, ನಿಸ್ವಾರ್ಥ ಸೇವೆ, ವೈದ್ಯಕೀಯ ನೈತಿಕತೆಯ ಪಾಲನೆ ಹಾಗೂ ಸಮಾಜದ ಆರೋಗ್ಯ ಕ್ಷೇತ್ರಕ್ಕೆ ನೀಡಿದ ಅಮೂಲ್ಯ ಕೊಡುಗೆಗಾಗಿ ರಾಜ್ಯ ಮಟ್ಟದ ವೈದ್ಯ ಚೇತನ ಪ್ರಶಸ್ತಿಗೆ ಡಾ.ಚಂದ್ರಶೇಖರ್ ಅವರನ್ನು ಆಯ್ಕೆ ಮಾಡಲಾಗಿತ್ತು.
ಈ ಸಾಧನೆಗೆ ವೈದ್ಯಕೀಯ ವಲಯದ ಗಣ್ಯರು, ಸಹೋದ್ಯೋಗಿಗಳು, ಅಭಿಮಾನಿಗಳು ಹಾಗೂ ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.
