ರಿಯಲ್ ಎಸ್ಟೇಟ್ ಹೂಡಿಕೆ ಹೆಸರಿನಲ್ಲಿ 70 ಲಕ್ಷ ವಂಚನೆ-ಬ್ಲ್ಯಾಕ್ ಮೇಲ್, ಜೀವ ಬೆದರಿಕೆ ಆರೋಪ: ಮಹಿಳೆ ಬಂಧನ

ಲೋಕಬಂಧು ನ್ಯೂಸ್‌ | ಉಡುಪಿ, ಜು.4
ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಹೂಡಿಕೆ ಮಾಡಿಸುವ ನೆಪದಲ್ಲಿ 70 ಲಕ್ಷ ರೂ. ಪಡೆದು ವಂಚಿಸಿದ್ದಲ್ಲದೆ, ಅಶ್ಲೀಲ ವೀಡಿಯೊ ಹೆಸರಿನಲ್ಲಿ ಬ್ಲ್ಯಾಕ್ ಮೇಲ್ ಮಾಡಿ ಜೀವ ಬೆದರಿಕೆಯೊಡ್ಡಿದ ಮಹಿಳೆಯನ್ನು ಉಡುಪಿ ನಗರ ಪೊಲೀಸರು ಪಡುಬಿದ್ರಿ ಕಂಚಿನಡ್ಕ ಎಂಬಲ್ಲಿ ಬಂಧಿಸಿದ್ದಾರೆ.
ಉಡುಪಿ ಮೂಲದ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ನೀಡಿದ ದೂರಿನಂತೆ, ಆರೋಪಿ ಝೀನತ್ ಇಬ್ರಾಹಿಂ ಎಂಬಾಕೆಯ ಪರಿಚಯವಾದ ಬಳಿಕ ಇಬ್ಬರೂ ಸೇರಿ ಉಡುಪಿಯಲ್ಲಿ ರಿಯಲ್ ಎಸ್ಟೇಟ್ ಕಚೇರಿ ಆರಂಭಿಸಿದ್ದರು. ಆ ವೇಳೆ ಆರೋಪಿಯ ಮಾತು ನಂಬಿದ ದೂರುದಾರ ಜಮೀನು ಖರೀದಿಗೆ ಹೂಡಿಕೆ ಮಾಡುವ ಉದ್ದೇಶದಿಂದ 70 ಲಕ್ಷ ರೂ. ಹಣ ನೀಡಿದ್ದರು.


ಆದರೆ, ಆರೋಪಿ ಆ ಹಣವನ್ನು ಜಮೀನು ಖರೀದಿಗೆ ಬಳಸದೆ ತನ್ನ ವೈಯಕ್ತಿಕ ಉದ್ದೇಶಗಳಿಗೆ ಬಳಸಿಕೊಂಡು ವಂಚಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.


ದೂರುದಾರರು ತಮ್ಮ ಕಚೇರಿ ಮುಚ್ಚುವ ಸಂದರ್ಭದಲ್ಲಿ ಅಲ್ಲಿದ್ದ ಕೆಲವು ರಹಸ್ಯ ಕಡತಗಳು ಹಾಗೂ ಪೆನ್ ಡ್ರೈವ್ ಗಳು ಪತ್ತೆಯಾಗಿದ್ದು, ಅವುಗಳಲ್ಲಿ ಹಲವು ಪ್ರಭಾವಿ ವ್ಯಕ್ತಿಗಳ ಖಾಸಗಿ ಹಾಗೂ ಅಶ್ಲೀಲ ಛಾಯಾಚಿತ್ರಗಳು ಮತ್ತು ವೀಡಿಯೊಗಳು ಇರುವುದು ಕಂಡುಬಂದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.


ಬಳಿಕ ದೂರುದಾರರು ತನ್ನ 70 ಲಕ್ಷ ರೂ. ಹಣವನ್ನು ವಾಪಸ್ ನೀಡುವಂತೆ ಕೇಳಿದಾಗ ಆರೋಪಿ ಅವರ ಹೊಸ ಕಚೇರಿಗೆ ಬಂದು ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದು, ಹಣ ನೀಡದಿದ್ದರೆ ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾಳೆ. ಅಲ್ಲದೆ, ತನ್ನ ಬಳಿ ದೂರುದಾರರ ಅಶ್ಲೀಲ ವೀಡಿಯೊಗಳಿವೆ ಎಂದು ಹೇಳಿ ನಿರಂತರವಾಗಿ ಬ್ಲ್ಯಾಕ್ ಮೇಲ್ ಮಾಡಿದ್ದಲ್ಲದೆ, ಅವರ ಪತ್ನಿ ಹಾಗೂ ಮಕ್ಕಳನ್ನು ಅಪಹರಿಸಿ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.


ಅಲ್ಲದೆ, ಸಬೀನಾ ಇಲಿಯಾಸ್ ಹಾಗೂ ಇತರರು ಆರೋಪಿಯೊಂದಿಗೆ ಸೇರಿ ಬ್ಲ್ಯಾಕ್ ಮೇಲ್ ಮೂಲಕ ಅಕ್ರಮವಾಗಿ ಹಣ ವಸೂಲಿ ಮಾಡಿ ವಂಚನೆಯ ಜಾಲ ನಡೆಸುತ್ತಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.


ದೂರಿನ ಆಧಾರದಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆಗಾಗಿ ಪಿಎಸ್ಐ ಭರತೇಶ್ ಕಂಕಣವಾಡಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.


ತನಿಖೆ ವೇಳೆ ಜು. 2ರಂದು ಪಡುಬಿದ್ರೆ ಸಮೀಪದ ಕಂಚಿನಡ್ಕ‌ ಮಸೀದಿ ಬಳಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ಆರೋಪಿ ಝೀನತ್, ಇಬ್ರಾಹಿಂ ಅವರ ಪುತ್ರಿ ಹಾಗೂ ಅಬ್ದಲ್ ಸಲಾಂ ಪತ್ನಿಯನ್ನು ಬಂಧಿಸಲಾಗಿದೆ.


ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಐದು ದಿನ ಪೊಲೀಸ್ ಕಸ್ಟಡಿಗೊಪ್ಪಿಸಲಾಗಿದೆ.


ಇದೇ ರೀತಿಯಲ್ಲಿ ಆರೋಪಿಯಿಂದ ಯಾರಾದರೂ ಮೋಸ ಅಥವಾ ವಂಚನೆಗೊಳಗಾಗಿದ್ದಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.