ಲೋಕಬಂಧು ನ್ಯೂಸ್ ಉಡುಪಿ, ಜು.12
ಅಜ್ಜರಕಾಡು ಜಿಲ್ಲಾಸ್ಪತ್ರೆಯ ನೂತನ ಕಟ್ಟಡದ ಮಾನವ ಸಂಪನ್ಮೂಲ ಮತ್ತು ಸಲಕರಣೆಗಳಿಗಾಗಿ ಸುಮಾರು 28 ಕೋ.ರೂ.ಗಳ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಆ ಕುರಿತು ಚರ್ಚೆಯನ್ನೂ ನಡೆಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಫರೀದ್ ಹೇಳಿದರು.
ಒಳರೋಗಿಗಳ ಆರೋಗ್ಯ ವಿಚಾರಣೆ
ಬಳಿಕ ಜಿಲ್ಲಾಸ್ಪತ್ರೆಯ ಒಳರೋಗಿಗಳನ್ನು ಭೇಟಿಯಾಗಿ ಆರೋಗ್ಯ ಮತ್ತು ಕ್ಷೇಮ ವಿಚಾರಿಸಿದರು. ವೈದ್ಯರ ಚಿಕಿತ್ಸೆ ಮತ್ತು ಶುಶ್ರೂಷಕ ಅಧಿಕಾರಿಗಳ ಚಿಕಿತ್ಸೆ ಬಗ್ಗೆ ಒಳರೋಗಿಗಳಿಂದ ಮಾಹಿತಿ ಪಡೆದರು.
ಆಸ್ಪತ್ರೆಯ ಹೊರರೋಗಿ ವಿಭಾಗಕ್ಕೆ ಭೇಟಿ ನೀಡಿ ಲಭ್ಯ ಪರಿಕರಗಳು, ಅಗತ್ಯ ವ್ಯವಸ್ಥೆ ಮತ್ತು ಸೌಲಭ್ಯಗಳ ಬಗ್ಗೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಚ್.ಅಶೋಕ್ ಹಾಗೂ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರಿಂದ ಮಾಹಿತಿ ಪಡೆದರು.
ಜು.16ರಂದು ವಿಶೇಷ ಸಭೆ
ನಗರದ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿ, ಆಸ್ಪತ್ರೆಯಲ್ಲಿನ ಸಮಸ್ಯೆಗಳ ಪರಿಹಾರ ಹಾಗೂ ಉಡುಪಿ ಜಿಲ್ಲೆಯ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿ ಚರ್ಚಿಸಲು ಬೆಂಗಳೂರಿನಲ್ಲಿ ಜು.16ರಂದು ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ಕರೆಯಲಾಗಿದೆ ಎಂದರು.
ಆಸ್ಪತ್ರೆಯಲ್ಲಿ ಸುಮಾರು 150ಕ್ಕೂ ಅಧಿಕ ಹೆರಿಗೆ ಆಗಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವ ಖಾದರ್, ತಾಲೂಕು ಆಸ್ಪತ್ರೆಗಳಲ್ಲಿ ಹೆರಿಗೆಗಳ ಅಂಕೆಸಂಖ್ಯೆಗಳ ಕುರಿತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಬಸವರಾಜ್ ಹುಬ್ಬಳ್ಳಿ ಅವರಿಂದ ಮಾಹಿತಿ ಪಡೆದರು.
ತಿಂಗಳಿಗೆರಡು ಬಾರಿ ಸುದ್ದಿಗೋಷ್ಟಿ
ಜಿಲ್ಲಾಸ್ಪತ್ರೆ ಹಾಗೂ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಜೊತೆಗೆ ತಾಲೂಕು ಆಸ್ಪತ್ರೆಗಳಲ್ಲಿ ನಡೆಯುವ ಶಸ್ತ್ರಚಿಕಿತ್ಸೆ, ವೈದ್ಯಕೀಯ ಚಿಕಿತ್ಸೆ, ರೋಗಿಗಳ ಸ್ಪಂದನೆ ಇತ್ಯಾದಿಗಳ ಬಗ್ಗೆ ಜಿಲ್ಲಾಸ್ಪತ್ರೆಯಲ್ಲಿ ಆಸ್ಪತ್ರೆಯ ಮುಖ್ಯಸ್ಥರು ತಿಂಗಳಿಗೆ ಎರಡು ಬಾರಿಯಾದರೂ ಪತ್ರಿಕಾಗೋಷ್ಟಿ ನಡೆಸಿ, ಜಿಲ್ಲಾಸ್ಪತ್ರೆಯಲ್ಲಿ ಉತ್ತಮ ಆರೋಗ್ಯ ಸೇವೆ ಲಭಿಸುತ್ತಿರುವ ಕುರಿತು ಮಾಧ್ಯಮಗಳ ಮೂಲಕ ಜನತೆಗೆ ತಿಳಿಸಿ ಅವರಲ್ಲಿ ಆತ್ಮವಿಶ್ವಾಸ ಮೂಡಿಸಿ, ಸರಕಾರಿ ಆಸ್ಪತ್ರೆಗಳ ಬಗ್ಗೆ ಜನರಲ್ಲಿ ಇನ್ನೂ ಹೆಚ್ಚಿನ ಒಲವು ಮೂಡಿಸಲು ಪ್ರೇರೇಪಿಸುವಂತೆ ಸೂಚಿಸಿದರು. ತಾಲೂಕು ಮಟ್ಟದಲ್ಲಿ ತಿಂಗಳಿಗೆ ಒಂದು ಬಾರಿಯಾದರೂ ಪತ್ರಿಕಾಗೋಷ್ಟಿ ಮೂಲಕ ಮಾಹಿತಿ ನೀಡುವಂತೆ ಸೂಚಿಸಿದರು.
ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಕಟ್ಟಡ, ಅದರ ದುರಸ್ತಿ ಮತ್ತು ತೊಂದರೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ಆಸ್ಪತ್ರೆ ಸ್ಥಳಾಂತರ
ಜಿಲ್ಲೆಯಲ್ಲಿ ವೈದ್ಯರ ಕೊರತೆ ಇಲ್ಲ. ಸರ್ಕಾರಿ ಆಸ್ಪತ್ರೆಗಳಿಗೆ ಬಂದವರಿಗೆ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ಮಾನಸಿಕ ಸಮಸ್ಯೆಯಿಂದ ರಸ್ತೆಗಳಲ್ಲಿ ತಿರುಗಾಡುವವರನ್ನೂ ಆರೈಕೆ ಮಾಡುವ ಕೆಲಸ ನಡೆಯುತ್ತಿದೆ.
ಉಡುಪಿ ಜಿಲ್ಲಾಸ್ಪತ್ರೆ ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡಲ್ಲಿ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಹಳೆಯ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸುವ ಆಲೋಚನೆ ಇದೆ ಎಂದೂ ಸಚಿವ ಖಾದರ್ ತಿಳಿಸಿದರು.
ರಕ್ತದಾನ ಜಾಗೃತಿ
ರಕ್ತದಾನ ಶಿಬಿರಗಳ ಬಗ್ಗೆ ರಾಜ್ಯದಾದ್ಯಂತ ಜಾಗೃತಿ ಮೂಡಿಸಲಾಗುವುದು. ಸಂಘಸಂಸ್ಥೆಗಳೂ ಆ ಕೆಲಸ ಮಾಡುತ್ತಿವೆ. ಎಲ್ಲರನ್ನೂ ಒಗ್ಗೂಡಿಸಿ ಜನಜಾಗೃತಿ ಮೂಡಿಸುವ ಕೆಲಸ ಮಾಡಲಾಗುವುದು ಎಂದರು.
ಕಾಂಗ್ರೆಸ್ ಪ್ರಮುಖರಾದ ರಮೇಶ ಕಾಂಚನ್, ಪ್ರಸಾದರಾಜ್ ಕಾಂಚನ್ ಮೊದಲಾದವರಿದ್ದರು.
.jpg)
.jpg)
.jpg)
.jpg)