ಲೋಕಬಂಧು ನ್ಯೂಸ್ | ಕಾರ್ಕಳ, ಜು.10
ಅಜೆಕಾರು ಪದ್ಮಗೋಪಾಲ ಎಜ್ಯುಕೇಶನ್ ಟ್ರಸ್ಟ್ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಕಳ, ಉಡುಪಿ, ಮಣಿಪಾಲ ಮತ್ತು ಅಜೆಕಾರು ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಸಕ್ತ ಸಾಲಿನಲ್ಲಿ ಪ್ರಥಮ ಹಂತದ ವಿದ್ಯಾರ್ಥಿ ವೇತನ 1 ಕೋಟಿ 44 ಲಕ್ಷ ರೂ.ವನ್ನು ಕಳೆದ ಮೇ 29ರಂದು ಕಾರ್ಕಳ ಗಣಿತ ನಗರ ಜ್ಞಾನಸುಧಾದಲ್ಲಿ ಹಾಗೂ 67 ಲಕ್ಷದ 80 ಸಾವಿರ ರೂ.ವನ್ನು ಜೂ.3ರಂದು ಅಜೆಕಾರು ಜ್ಞಾನಸುಧಾದಲ್ಲಿ ವಿತರಿಸಲಾಗಿದ್ದು, ಇದೀಗ ದ್ವಿತೀಯ ಹಂತದ ವಿದ್ಯಾರ್ಥಿ ವೇತನ 55 ಲಕ್ಷದ 30 ಸಾವಿರ ರೂ.ವನ್ನು ಜು.13ರಂದು ಮಣಿಪಾಲ ಜ್ಞಾನಸುಧಾದಲ್ಲಿ ಹಾಗೂ 39 ಲಕ್ಷದ 20 ಸಾವಿರ ರೂ.ವನ್ನು ಜು.14ರಂದು ಉಡುಪಿ ಜ್ಞಾನಸುಧಾದಲ್ಲಿ ವಿತರಿಸಲಾಗುವುದು.
ಆ ಮೂಲಕ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಸಂಸ್ಥೆಯಿಂದ ಒಟ್ಟು 3 ಕೋಟಿ 6 ಲಕ್ಷದ 30 ಸಾವಿರ ರೂ. ವಿದ್ಯಾರ್ಥಿ ವೇತನ ವಿತರಿಸಿದಂತಾಗುತ್ತದೆ.
271 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ
ಟ್ರಸ್ಟ್ ವತಿಯಿಂದ ಅಜೆಕಾರು ಜ್ಞಾನಸುಧಾದಲ್ಲಿ ಪ್ರಸಕ್ತ ಸಾಲಿನಲ್ಲಿ 9ನೇ ತರಗತಿ ಹಾಗೂ ಪ್ರಥಮ ಪಿಯುಸಿಯ 112 ವಿದ್ಯಾರ್ಥಿಗಳಿಗೆ ಹಾಗೂ ಕಾರ್ಕಳ ಜ್ಞಾನಸುಧಾದಲ್ಲಿ 6ನೇ ತರಗತಿಯಿಂದ ದ್ವಿತೀಯ ಪಿಯುಸಿ ವರೆಗಿನ 159 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುತ್ತಿರುವುದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು.
ಶೈಕ್ಷಣಿಕ ಸಾಧನೆ
ಅಲ್ಲದೆ, ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳಲ್ಲಿ 2025ರಲ್ಲಿ ನೀಟ್ ಬರೆದ 622 ವಿದ್ಯಾರ್ಥಿಗಳ ಪೈಕಿ 227 ವಿದ್ಯಾರ್ಥಿಗಳು ಎಮ್.ಬಿ.ಬಿ.ಎಸ್ ಪ್ರವೇಶ ಪಡೆದಿದ್ದಾರೆ ಹಾಗೂ 2026ರಲ್ಲಿ 5 ವಿದ್ಯಾರ್ಥಿಗಳು ಐ.ಐ.ಟಿ. ಮತ್ತು 15 ವಿದ್ಯಾರ್ಥಿಗಳು ಎನ್.ಐ.ಟಿ. ಪ್ರವೇಶ ಪಡೆದಿದ್ದು, 201 ವಿದ್ಯಾರ್ಥಿಗಳು ಕೆ.ಸಿ.ಇ.ಟಿ. ಇಂಜಿನಿಯರಿಂಗ್'ನಲ್ಲಿ 5 ಸಾವಿರದೊಳಗಿನ ರ್ಯಾಂಕ್ ಪಡೆದಿದ್ದಾರೆ ಎಂದು ಸಂಸ್ಥೆ ಪ್ರಕಟಣೆ ತಿಳಿಸಿದೆ.
