ಲೋಕಬಂಧು ನ್ಯೂಸ್ | ಬೆಂಗಳೂರು, ಜು.11
ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಸುರೇಶ್ ಕುಮಾರ್ ಅವರು ತಮ್ಮ ತಂಡದೊಂದಿಗೆ ಬೆಂಗಳೂರಿನಿಂದ ಆಂಧ್ರಪ್ರದೇಶದ ತಿರುಪತಿಗೆ ಸೈಕಲ್ ಮೂಲಕವೇ ಪ್ರಯಾಣ ಬೆಳೆಸಿ ಎಲ್ಲರ ಹುಬ್ಬೇರಿಸಿದ್ದಾರೆ.
ಬೆಂಗಳೂರಿನಿಂದ ತಿರುಪತಿ ವೆಂಕಟೇಶ್ವರ ಸ್ವಾಮಿ ಸನ್ನಿಧಿ ವರೆಗಿನ ಒಟ್ಟು 265 ಕಿ.ಮೀ. ದೂರದ ಹಾದಿಯನ್ನು ಶಾಸಕರು ಮತ್ತವರ ಸೈಕ್ಲಿಂಗ್ ತಂಡ ಕೇವಲ 14 ಗಂಟೆ 10 ನಿಮಿಷಗಳಲ್ಲಿ ಕ್ರಮಿಸಿ ದಾಖಲೆ ಬರೆದಿದ್ದಾರೆ.
ತನ್ನ 60ರ ಹರೆಯದಲ್ಲೂ ಯುವಕರಿಗೂ ಮಾದರಿಯಾಗುವಂತೆ ಸೈಕಲ್ ತುಳಿದಿರುವ ಸುರೇಶ್ ಕುಮಾರ್, ಆರೋಗ್ಯ ಮತ್ತು ಪರಿಸರ ಸಂರಕ್ಷಣೆಯ ಮಹತ್ವದ ಸಂದೇಶ ಸಾರಿದ್ದಾರೆ.
ಬೆಂಗಳೂರಿನಿಂದ ಹೊರಟ ಈ ಸೈಕ್ಲಿಂಗ್ ತಂಡ ಹೆದ್ದಾರಿಯ ಕಠಿಣ ಹಾದಿ, ಏರಿಳಿತಗಳನ್ನು ಯಶಸ್ವಿಯಾಗಿ ದಾಟಿ ನಿಗದಿತ ಅವಧಿಗಿಂತ ಮುನ್ನವೇ ತಿರುಪತಿ ಬೆಟ್ಟದ ತಪ್ಪಲನ್ನು ತಲುಪಿದೆ.
10 ಮಂದಿಯ ತಂಡದೊಂದಿಗೆ ಶಾಸಕ ಸುರೇಶ್ ಕುಮಾರ್ ಸೈಕಲ್ನಲ್ಲಿ ತೆರಳಿದ್ದು, ಈ ಟೀಂ ಸತತ 3ನೇ ಬಾರಿಗೆ ತಿರುಪತಿಗೆ ಸೈಕ್ಲಿಂಗ್ ಮಾಡಿದೆ.
ಬಸವೇಶ್ವರದಿಂದ ರಾಜಾಜಿನಗರ ಒಂದನೇ ಬ್ಲಾಕ್, ಯಶವಂತಪುರ, ಬಿಇಎಲ್ ವೃತ್ತ, ಅವಲಳ್ಳಿ ಅರಣ್ಯ ಪ್ರದೇಶ, ರಾಜಾನುಕುಂಟೆ, ನಾಡಪ್ರಭು ಕೆಂಪೇಗೌಡ ವಿಮಾನ ನಿಲ್ದಾಣ, ದೇವನಹಳ್ಳಿ, ವಿಜಯಪುರ, ಕೈವಾರ, ಮದನಪಲ್ಲಿ, ಪೀಲೇರು ಮಾರ್ಗವಾಗಿ ಸಾಗಿ ತಿರುಪತಿ ತಲುಪಿದೆ.
