ಅರಬೈಲ್ ಘಾಟ್ ಬಳಿ ಅಪಘಾತ: ಆರು ಸಾವು

ಲೋಕಬಂಧು ನ್ಯೂಸ್ | ಕಾರವಾರ, ಜು.9
ಇಲ್ಲಿನ ಅರಬೈಲ್ ಘಾಟ್‌ನ ಬಳಗಾರ್ ಬಳಿ ಲಾರಿ ಹಾಗೂ ತೂಫಾನ್ ಕಮರ್ಷಿಯಲ್ ವಾಹನದ ನಡುವೆ ಗುರುವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಆರು ಜನರು ಸ್ಥಳದಲ್ಲೇ ಮೃತಪಟ್ಟು, ಮೂವರು ಗಂಭೀರ ಗಾಯಗೊಂಡಿದ್ದಾರೆ.
ಮೃತರೆಲ್ಲರೂ ಧಾರವಾಡ ಮೂಲದವರಾಗಿದ್ದು, ಹುಬ್ಬಳ್ಳಿ-ಧಾರವಾಡದಲ್ಲಿ ‘ಸ್ವಿಗ್ಗಿ' ಸಂಸ್ಥೆಯಲ್ಲಿ ಪಾರ್ಟ್ ಟೈಮ್ ಡೆಲಿವರಿ ಬಾಯ್ಸ್ ಆಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.


ಪ್ರವಾಸಕ್ಕೆ ಹೊರಟಾಗ ದುರಂತ
ಧಾರವಾಡದಿಂದ ರಾತ್ರಿ ವೇಳೆ ಧರ್ಮಸ್ಥಳ ಹಾಗೂ ಮಂಗಳೂರು ಕಡೆಗೆ ಪ್ರವಾಸ ಹೊರಟಿದ್ದಾಗ ಈ ಘೋರ ದುರಂತ ಸಂಭವಿಸಿದ್ದು ತೂಫಾನ್ ವಾಹನದಲ್ಲಿ ಚಾಲಕ ಸೇರಿದಂತೆ ಒಟ್ಟು 9 ಜನರಿದ್ದರು. ಅರಬೈಲ್ ಘಾಟ್‌ನ ಬಳಗಾರ್ ತಲುಪುತ್ತಿದ್ದಂತೆ ತೂಫಾನ್ ವಾಹನ ಹಾಗೂ ಲಾರಿ ನಡುವೆ ಮುಖಾಮುಖಿ ಢಿಕ್ಕಿಯಾಗಿದ್ದು, ಢಿಕ್ಕಿಯ ತೀವ್ರತೆಗೆ ತೂಫಾನ್ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದೆ.


ಮೃತರ ವಿವರ
ಅಪಘಾತದಲ್ಲಿ ತೂಫಾನ್ ವಾಹನದಲ್ಲಿದ್ದ ಆರು ಜನರು ದುರ್ಮರಣಕ್ಕೀಡಾಗಿದ್ದು ಮೃತರನ್ನು ​ಬಸವರಾಜ್ (48), ​ಅಭಿಷೇಕ್ ಈಶ್ವರ್ (28), ​ಅಕ್ಷಯ (26), ​ಅಭಿಷೇಕ್ (26), ​ವಾಹನ ಚಾಲಕ ಸಂಜೀವ/ಸಂಜಯ ಅಂಗಡಿ (33) ವರ್ಷ, ​ಮಂಜುನಾಥ ಚುಲಕಿ (32) ಎಂದು ಗುರುತಿಸಲಾಗಿದೆ.


ಮೂವರಿಗೆ ಗಂಭೀರ ಗಾಯ
ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿರುವ ಶಿವರಾಜ್ ದುರ್ಗಪ್ಪ ಮಡಿವಾಳ್ (22) ಹಾಗೂ ​ಸಚಿನ್, ​ಚೆನ್ನಬಸಯ್ಯ ಮತ್ತು ಬಸಲಿಂಗಯ್ಯ ಸಂಪಗಾವ (28) ಎಂಬ ಮೂವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗಿದೆ.


ಘಟನಾ ಸ್ಥಳಕ್ಕೆ ಯಲ್ಲಾಪುರ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.


ಮೃತದೇಹಗಳ‌ನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.‌ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.