ಲೋಕಬಂಧು ನ್ಯೂಸ್ | ಉಡುಪಿ, ಜು.12
ಸರಕಾರಿ ಶಾಲೆಗಳಲ್ಲಿ ಮಕ್ಕಳ ಗೈರುಹಾಜರಿ ತಡೆ, ಪೌಷ್ಟಿಕಾಂಶ, ಕಲಿಕಾ ಸಾಮರ್ಥ್ಯ ಹೆಚ್ಚಿಸುವ ಉದ್ದೇಶದಿಂದ ಆರಂಭಿಸಲಾದ ಅಕ್ಷರ ದಾಸೋಹ ಯೋಜನೆಗೆ 25 ವರ್ಷ ಪೂರ್ಣಗೊಂಡಿದ್ದರೂ, ಬೆಲೆ ಏರಿಕೆಗೆ ಅನುಗುಣವಾಗಿ ಅನುದಾನ ಹೆಚ್ಚಿಸದೆ ಯೋಜನೆಯನ್ನು ಖಾಸಗಿ ಸಂಸ್ಥೆಗಳಿಗೆ ವಹಿಸುವ ಸರಕಾರದ ನೀತಿ ವಿರೋಧಿಸಿ ಸ್ಕೀಮ್ ನೌಕರರು ದೇಶಾದ್ಯಂತ ಕರಾಳ ದಿನ ಆಚರಿಸಿದರು.
ಉಡುಪಿ ಜಿಲ್ಲಾ ಅಕ್ಷರ ದಾಸೋಹ ನೌಕರರ ಸಂಘ (ಸಿಐಟಿಯು) ರಾಜ್ಯವ್ಯಾಪಿ ಹೋರಾಟದ ಭಾಗವಾಗಿ ಜು.13ರಂದು ಬಿಸಿಯೂಟ ಬಂದ್ ಮಾಡಿ, ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲು ನಿರ್ಧರಿಸಿದೆ.
ಹೋರಾಟದಲ್ಲಿ ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಅಕ್ಷರ ದಾಸೋಹ ನೌಕರರ ಸಂಘದ ಗೌರವಾಧ್ಯಕ್ಷೆ ಎಸ್.ವರಲಕ್ಷ್ಮಿ ಭಾಗವಹಿಸಲಿದ್ದಾರೆ.
2008ರಿಂದ ಕೇಂದ್ರ ಸರಕಾರ ಅಡುಗೆ ಸಿಬ್ಬಂದಿಯ ಗೌರವಧನ ಹೆಚ್ಚಿಸದೆ ನಿರ್ಲಕ್ಷ್ಯ ವಹಿಸಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಚುನಾವಣಾ ಸಂದರ್ಭ ನೀಡಿದ್ದ ಭರವಸೆಯಂತೆ ಅಡುಗೆ ಸಿಬ್ಬಂದಿಯ ವೇತನವನ್ನು 7 ಸಾವಿರ ರೂ. ಹೆಚ್ಚಳ ಮಾಡುವಂತೆ ಸಂಘ ಒತ್ತಾಯಿಸಿದೆ.
ಈ ಸಂಬಂಧದ ಮುಷ್ಕರದ ನೋಟಿಸ್'ನ್ನು ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಡಾ.ಅಶೋಕ್ ಕಾಮತ್ ಅವರಿಗೆ ನೀಡಲಾಯಿತು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಂದಾ, ಜಿಲ್ಲಾ ಕಾರ್ಯದರ್ಶಿಗಳಾದ ರತ್ನಾ ಮತ್ತು ಮಂಜುಳಾ, ಸಿಐಟಿಯು ಜಿಲ್ಲಾ ಕೋಶಾಧಿಕಾರಿ ಕವಿರಾಜ್ ಎಸ್.ಕಾಂಚನ್ ಉಪಸ್ಥಿತರಿದ್ದರು.
