ಅಯೋಧ್ಯೆ ಪ್ರಕರಣ: ಮೋದಿ, ಯೋಗಿ, ಶಾ ರಾಜೀನಾಮೆ ನೀಡಲಿ

ಲೋಕಬಂಧು ನ್ಯೂಸ್ ಕಾರವಾರ, ಜು.13
ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ನಡೆದ ಕೋಟ್ಯಂತರ ರೂ. ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ವಿ.ಎಸ್. ಉಗ್ರಪ್ಪ ಆಗ್ರಹಿಸಿದರು.ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮ ಮಂದಿರ ಟ್ರಸ್ಟ್‌ನ ಇಬ್ಬರು ಸದಸ್ಯರು ರಾಜೀನಾಮೆ ನೀಡಿರುವುದು ಹಾಗೂ ಎಂಟು ಮಂದಿಯನ್ನು ಬಂಧಿಸಿರುವುದು ಹಗರಣದ ಗಂಭೀರತೆಯನ್ನು ತೋರಿಸುತ್ತದೆ.


ಪ್ರಧಾನಿಯವರ ಮಾಜಿ ಪ್ರಧಾನ ಕಾರ್ಯದರ್ಶಿ ನೃಪೇಂದ್ರ ಮಿಶ್ರಾ ಸೇರಿದಂತೆ ಹಿರಿಯ ಅಧಿಕಾರಿಗಳು ಇದ್ದ ಟ್ರಸ್ಟ್‌ನಲ್ಲಿ ಇಷ್ಟೆಲ್ಲಾ ಅಕ್ರಮ ನಡೆದಿದ್ದರೂ ಪ್ರಧಾನಿ ಹಾಗೂ ಅಮಿತ್ ಶಾ ಮೌನ ವಹಿಸಿರುವುದು ಅನುಮಾನಗಳಿಗೆ ಕಾರಣವಾಗಿದೆ. ಪ್ರಕರಣದ ಕುರಿತು ಸಮಗ್ರ ತನಿಖೆಯಾಗಬೇಕು ಎಂದು ಉಗ್ರಪ್ಪ ಒತ್ತಾಯಿಸಿದರು.


ರಾಜ್ಯದಲ್ಲಿ ಬಾಂಗ್ಲಾ ದೇಶಿಯರಿಗೆ ಕಾಂಗ್ರೆಸ್ ಮಣೆ ಹಾಕುತ್ತಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಉಗ್ರಪ್ಪ, ಭಾರತದ ಪೌರತ್ವ ಇಲ್ಲದವರಿಗೆ ನಮ್ಮ ದೇಶದಲ್ಲಿ ಯಾವುದೇ ಕಾರಣಕ್ಕೂ ಅವಕಾಶ ಇಲ್ಲ ಎನ್ನುವುದೇ ಕಾಂಗ್ರೆಸ್‌ನ ನಿಲುವು. ಬಾಂಗ್ಲಾದೇಶದಿಂದ ಪಶ್ಚಿಮ ಬಂಗಾಳ ಹಾಗೂ ಅಸ್ಸಾಂ ಮೂಲಕ ಒಳನುಸುಳುವಿಕೆ ಆಗುತ್ತಿದ್ದರೆ ಅದಕ್ಕೆ ನೇರವಾಗಿ ಕೇಂದ್ರ ಸರ್ಕಾರವೇ ಹೊಣೆ.


ಅವರು ಯಾವುದೇ ವಿಷಯವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದಿಲ್ಲ. ನಮ್ಮ ಸರ್ಕಾರ ಜಾತಿ ಕಾರಣಕ್ಕೆ ಯಾವುದೇ ಸೌಲಭ್ಯಗಳನ್ನು ನೀಡುವುದಿಲ್ಲ ಎಂದರು.