ಅಯೋಧ್ಯೆ ಹುಂಡಿ ಲೂಟಿ: ಆರ್‌ಎಸ್‌ಎಸ್ ಕಳವಳ

ಲೋಕಬಂಧು ನ್ಯೂಸ್ ಬೆಳಗಾವಿ, ಜು.12
ಗಡಿನಾಡು ಬೆಳಗಾವಿಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ದ ಅಖಿಲ ಭಾರತೀಯ ಪ್ರಾಂತ ಪ್ರಚಾರಕರ ಮೂರು ದಿನಗಳ ಮಹತ್ವದ ಸಭೆ ಹಲವಾರು ವಿಷಯಗಳ ಚಿಂತನ– ಮಂಥನದೊಂದಿಗೆ ಭಾನುವಾರ ಮುಕ್ತಾಯಗೊಂಡಿತು.ಅಯೋಧ್ಯೆ ಶ್ರೀರಾಮ ಮಂದಿರದ ಕಾಣಿಕೆ ಹುಂಡಿ ಹಣ ಎಣಿಕೆ ಅಕ್ರಮದ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆ ನಡೆದು ತೀವ್ರ ಕಳವಳ ವ್ಯಕ್ತಪಡಿಸಲಾಯಿತು.


ರಾಮ ಮಂದಿರದ ಬಗ್ಗೆ ದೇಶದ ಕೋಟ್ಯಂತರ ಭಕ್ತರು ಹೊಂದಿರುವ ಶ್ರದ್ಧೆ ಮತ್ತು ನಂಬಿಕೆಗೆ ಧಕ್ಕೆ ತರುವ ಘಟನೆ. ಇದು ಮತ್ತೆಂದೂ ಮರುಕಳಿಸದಂತೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸಭೆ ಆಶಿಸಿತು.


ಟ್ರಸ್ಟ್‌ನ ಮನವಿಯ ಮೇರೆಗೆ ಆರಂಭಿಸಿರುವ ವಿಶೇಷ ತನಿಖಾ ತಂಡ ಹಾಗೂ ಪೊಲೀಸ್ ತನಿಖೆ ನಿರ್ಣಾಯಕ ಹಂತ ತಲುಪಲಿದೆ ಎಂಬ ವಿಶ್ವಾಸವನ್ನೂ ಸಭೆ ವ್ಯಕ್ತಪಡಿಸಿತು.


ಸರಸಂಘಚಾಲಕ ಮೋಹನ್ ಭಾಗವತ್, ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಸೇರಿದಂತೆ ದೇಶದ ವಿವಿಧ ಭಾಗಗಳ 226 ಮಂದಿ ಕಾರ್ಯಕರ್ತರು ಸಭೆಯಲ್ಲಿ ಪಾಲ್ಗೊಂಡಿದ್ದರು.