ಲೋಕಬಂಧು ನ್ಯೂಸ್ | ಉಡುಪಿ, ಜು.9
ಅಯೋಧ್ಯೆಯ ಶ್ರೀರಾಮ ಮಂದಿರದ ದೇಣಿಗೆ ಲೂಟಿ ಪ್ರಕರಣದ ಮೂಲಕ ಬಿಜೆಪಿ, ರಾಮ ಭಕ್ತರ ನಂಬಿಕೆಗೆ ದ್ರೋಹ ಬಗೆದಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಭಾಸ್ಕರ ರಾವ್ ಕಿದಿಯೂರು ಆರೋಪಿಸಿದ್ದಾರೆ.
ಗುರುವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಮನ ಹೆಸರನ್ನು ಬಳಸಿಕೊಂಡು ಬಿಜೆಪಿ ಚುನಾವಣೆಗಳನ್ನು ಎದುರಿಸಿದ್ದು, ಮನೆ- ಮನೆಗೆ ಇಟ್ಟಿಗೆ ನೀಡಿ ಪೂಜೆ ಮಾಡಿಸಿ ಮತ ಯಾಚಿಸಿರುವುದು ಇತಿಹಾಸ. ರಾಮ ಮಂದಿರಕ್ಕಾಗಿ ದಶಕಗಳಿಂದ ಭಕ್ತರಿಂದ ಸಂಗ್ರಹಿಸಲಾದ ಹಣದ ಮೊತ್ತ ಮತ್ತು ಅದರ ನಿರ್ವಹಣೆ ಬಗ್ಗೆ ಅಯೋಧ್ಯಾ ಟ್ರಸ್ಟ್‌ನಿಂದ ಯಾವುದೇ ಮಾಹಿತಿ ಬಿಡುಗಡೆಗೊಂಡಿಲ್ಲ.
ರಾಮ ಮಂದಿರ ಹೆಸರಿನಲ್ಲಿ ಕಳೆದ 5 ವರ್ಷಗಳಲ್ಲಿ ಸುಮಾರು 500 ಕೋಟಿ ರೂ. ಲೂಟಿಯಾಗಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ರಾಮ ಮಂದಿರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಹಾಗೂ ಟ್ರಸ್ಟಿ ಅನಿಲ್ ಮಿಶ್ರಾ ಅವರನ್ನು ಟ್ರಸ್ಟ್‌ನಿಂದ ಹೊರದಬ್ಬಲಾಗಿದೆ.
ಈ ನಿಟ್ಟಿನಲ್ಲಿ ಟ್ರಸ್ಟ್‌ನ್ನು ವಿಸರ್ಜಿಸಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಇಲ್ಲದೇ ಹೋದಲ್ಲಿ ಮಂದಿರ ನಿರ್ಮಾಣಗಳು ಹಣ ಲೂಟಿಯ ಕೇಂದ್ರಗಳಾಗುವ ಅಪಾಯ ಇದೆ ಎಂದು ಭಾಸ್ಕರ ರಾವ್ ಎಚ್ಚರಿಸಿದ್ದಾರೆ.
ಮಂದಿರ ನಿರ್ಮಾಣದ ವೇಳೆ ರಿಯಲ್ ಎಸ್ಟೇಟ್ ವ್ಯವಹಾರ ನಡೆದಿರುವ ಆರೋಪಗಳಿದ್ದು, ಟ್ರಸ್ಟ್‌ನ ಹೇಳಿಕೆಯಂತೆ 2022ರ ಜ.22ರಂದು ನಡೆದಿದ್ದ ಶ್ರೀರಾಮನ ಪ್ರಾಣಪ್ರತಿಷ್ಠೆ ಕಾರ್ಯಕ್ರಮಕ್ಕೆ ಅಂದಾಜು 112 ಕೋಟಿ ರೂ. ಖರ್ಚಾಗಿರುವುದು ಬೆಳಕಿಗೆ ಬಂದಿದೆ.
ರಾಮ ಮಂದಿರಕ್ಕೆ ಭಕ್ತರು ನೀಡಿದ ಆಭರಣಗಳ ಸಂಪೂರ್ಣ ಮಾಹಿತಿಯೂ ಲಭ್ಯವಿಲ್ಲ. ಮಂದಿರದಲ್ಲಿ ನಡೆಯುವ ಯಾವುದೇ ಅವ್ಯವಹಾರಗಳು ಸೋರಿಕೆಯಾಗಿ ಭಕ್ತರಿಗೆ ಮಾಹಿತಿ ದೊರಕಬಾರದು ಎಂಬ ಹಿನ್ನೆಲೆಯಲ್ಲಿ ಮಾಹಿತಿ ಹಕ್ಕು ಕಾಯ್ದೆ ವ್ಯಾಪ್ತಿಯಿಂದ ರಾಮ ಮಂದಿರವನ್ನು ಹೊರಗಿಡಲಾಗಿದೆ ಸಿಸಿ ಟಿವಿ ಕ್ಯಾಮೆರಾಗಳನ್ನು ತೆಗೆದುಹಾಕಲಾಗಿದೆ. ಕಳಪೆ ಕಾಮಗಾರಿಯಿಂದಾಗಿ ಮಂದಿರದ ಕಟ್ಟಡದಲ್ಲಿ ಬಿರುಕು ಕಂಡುಬಂದಿದೆ ಎಂಬ ಆರೋಪ ಕೇಳಿಬಂದಿದೆ.
ಈ ಎಲ್ಲಾ ಆರೋಪಗಳ ಸತ್ಯಾಸತ್ಯತೆ ಹೊರಬರಬೇಕಾದರೆ ಟ್ರಸ್ಟ್‌ನ್ನು ಸಂಪೂರ್ಣ ವಿಸರ್ಜಿಸಿ, ಸುಪ್ರೀಂ ಕೋರ್ಟ್ ನೇತೃತ್ವದಲ್ಲಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ರಾಮ ಮಂದಿರ ಹಗರಣಗಳ ಬಗ್ಗೆ ಸಮಗ್ರ ತನಿಖೆ ನಡೆಸಸಬೇಕು ಎಂದು ಭಾಸ್ಕರ ರಾವ್ ಆಗ್ರಹಿಸಿದ್ದಾರೆ.
ಶ್ರೀರಾಮನ ಪ್ರಾಣಪ್ರತಿಷ್ಠೆ ಮಾಡಿ ಟ್ರಸ್ಟ್ ಸದಸ್ಯರನ್ನು ಆಯ್ಕೆ ಮಾಡಿದ ಪ್ರಧಾನಿ ಗಾಢ ಮೌನ ವ್ಯವಸ್ಥೆಯಲ್ಲಿನ ಲೋಪವನ್ನು ಒಪ್ಪಿಕೊಂಡಂತಾಗಿದೆ. ಕಾರಣ, ಸಾಧನೆಯನ್ನು ವೈಭವೀಕರಿಸಿಕೊಳ್ಳುವ ಪ್ರಧಾನಿ ಮೋದಿ ವೈಫಲ್ಯಗಳ ಬಗ್ಗೆ ಮೌನಕ್ಕೆ ಮೊರೆಹೋಗುವುದು ಸಾಮಾನ್ಯ ಎಂದು ಭಾಸ್ಕರ ರಾವ್ ಕಿದಿಯೂರು ವ್ಯಂಗ್ಯವಾಡಿದ್ದಾರೆ.
