ಲೋಕಬಂಧು ನ್ಯೂಸ್ | ಮುಂಬೈ, ಜು.9
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಬೆಳಗಾವಿ ಭೇಟಿ ಸಂದರ್ಭದಲ್ಲಿಯೇ ಮಹಾರಾಷ್ಟ್ರದಲ್ಲಿ ಮಿಂಚಿನ ಬೆಳವಣಿಗೆಯಾಗಿದ್ದು, ಸಿಎಂ ದೇವೇಂದ್ರ ಫಡ್ನವಿಸ್ ನೇತೃತ್ವದಲ್ಲಿ ಮಹಾರಾಷ್ಟ್ರ ಗಡಿ ಉನ್ನತ ಮಟ್ಟದ ಸಮಿತಿ ಸಭೆ ನಡೆದಿದೆ.
ಬೆಳಗಾವಿ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮುಂಬೈನ ವಿಧಾನ ಭವನದಲ್ಲಿ ನಡೆದ ಉನ್ನತ ಮಟ್ಟದ ಸಭೆಯ ನಂತರ ಮಾತನಾಡಿದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, 2004ರಿಂದ ಸುಪ್ರೀಂಕೋರ್ಟ್ ಅಂಗಳದಲ್ಲಿರುವ ಈ ಗಡಿ ವಿವಾದದ ತ್ವರಿತ ವಿಚಾರಣೆ ಕೋರಿ ಶೀಘ್ರದಲ್ಲೇ ಹೊಸ ಅರ್ಜಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಗಡಿ ಭಾಗದಲ್ಲಿರುವ ಮರಾಠಿ ಭಾಷಿಕರ ಪರವಾಗಿ ಇಡೀ ಮಹಾರಾಷ್ಟ್ರ ನಿಲ್ಲಲಿದೆ ಎಂದು ಭರವಸೆ ನೀಡಿರುವ ಫಡ್ನವೀಸ್, ಕರ್ನಾಟಕದಲ್ಲಿರುವ ಮರಾಠಿ ಹೋರಾಟಗಾರರ ವಿರುದ್ಧ ದಾಖಲಾಗಿರುವ ಪ್ರಕರಣಗಳಿಗೆ ಉಚಿತವಾಗಿ ವಕೀಲರನ್ನು ನೇಮಿಸಿ, ಸಂಪೂರ್ಣ ಆರ್ಥಿಕ ಹಾಗೂ ಕಾನೂನು ನೆರವು ನೀಡುವುದಾಗಿ ಘೋಷಿಸಿದ್ದಾರೆ. ಅಲ್ಲದೆ, ಸಂಸದರ ಮೂಲಕ ರಾಷ್ಟ್ರೀಯ ಭಾಷಾ ಅಲ್ಪಸಂಖ್ಯಾತರ ಆಯೋಗಕ್ಕೆ ದೂರು ನೀಡಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.
ಮಹಾರಾಷ್ಟ್ರ ಗಡಿ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಮಹಾರಾಷ್ಟ್ರ ಸರ್ಕಾರ ಗಡಿಭಾಗದ ಮರಾಠಿ ಭಾಷಿಕರ ಬೆನ್ನಿಗೆ ನಿಂತಿರುವುದು ಈಗಾಗಲೇ ಗಡಿ ಭಾಗದ ಮರಾಠಿ ಭಾಷಿಕರಿಗೆ ಶಿಕ್ಷಣದಲ್ಲಿ ಮೀಸಲಾತಿ, ಆರೋಗ್ಯ ಯೋಜನೆಯನ್ನು ಮಹಾರಾಷ್ಟ್ರ ಸರ್ಕಾರ ನೀಡುತ್ತಿದ್ದು, ಒಕ್ಕೂಟ ವ್ಯವಸ್ಥೆ ಧಿಕ್ಕರಿಸಿ ಕರ್ನಾಟಕದ ಗಡಿ ಪ್ರದೇಶದ ಮರಾಠಿ ಭಾಷಿಕರಿಗೆ ವಿವಿಧ ಯೋಜನೆ ಘೋಷಣೆ ಮಾಡಿದೆ.
