ಲೋಕಬಂಧು ನ್ಯೂಸ್ ಉಡುಪಿ, ಜು.9
ನಗರದ ಅಜ್ಜರಕಾಡು ಜಿಲ್ಲಾಸ್ಪತ್ರೆ ರಕ್ತ ನಿಧಿ ಕೇಂದ್ರದ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಆರೋಪಗಳು ಸಂಪೂರ್ಣ ಸುಳ್ಳು ಹಾಗೂ ಆಧಾರ ರಹಿತವಾಗಿದ್ದು, ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಂದು ಜಿಲ್ಲಾಸ್ಪತ್ರೆಯ ಸರ್ಜನ್ ಡಾ.ಅಶೋಕ್ ತಿಳಿಸಿದ್ದಾರೆ.ಜು.7ರಂದು ಕೆಲವು ಸಾಮಾಜಿಕ ಮಾಧ್ಯಮಗಳಲ್ಲಿ ಜಿಲ್ಲಾ ಆಸ್ಪತ್ರೆಯ ರಕ್ತ ನಿಧಿ ಕೇಂದ್ರದಿಂದ ಯಾವುದೇ ದಾಖಲಾತಿ ಅಥವಾ ರಶೀದಿ ಇಲ್ಲದೆ ರಕ್ತ ವಿತರಿಸಲಾಗುತ್ತಿದೆ ಹಾಗೂ ಒಂದೇ ಬಾರಿ 15 ಯೂನಿಟ್ ರಕ್ತವನ್ನು ಖಾಸಗಿ ಆಸ್ಪತ್ರೆಗೆ ನೀಡಲಾಗಿದೆ ಎಂಬ ಸುದ್ದಿ ಪ್ರಕಟವಾಗಿತ್ತು. ಆದರೆ, ಈ ಎಲ್ಲಾ ಆರೋಪಗಳು ಸತ್ಯಕ್ಕೆ ದೂರವಾಗಿದ್ದು, ಯಾವುದೇ ಆಧಾರವಿಲ್ಲ ಎಂದು ಜಿಲ್ಲಾಸ್ಪತ್ರೆ ಪ್ರಕಟಣೆ ತಿಳಿಸಿದೆ.
ಜಿಲ್ಲಾ ಆಸ್ಪತ್ರೆಯ ರಕ್ತ ನಿಧಿ ಕೇಂದ್ರದಲ್ಲಿ ರಕ್ತ ಹಾಗೂ ರಕ್ತ ಘಟಕಗಳ ವಿತರಣೆಯನ್ನು ಕರ್ನಾಟಕ ಸರ್ಕಾರದ ಜಾರಿಯಲ್ಲಿರುವ ಮಾರ್ಗಸೂಚಿ, ನಿಯಮ ಹಾಗೂ ರಕ್ತನಿಧಿ ಕೇಂದ್ರದ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ಸ್ (ಎಸ್ಓಪಿಎಸ್) ಅನ್ವಯ ಕಟ್ಟುನಿಟ್ಟಾಗಿ ನಡೆಸಲಾಗುತ್ತಿದೆ.
ಪ್ರತೀ ಯೂನಿಟ್ ರಕ್ತ ಅಥವಾ ರಕ್ತ ಘಟಕವನ್ನು ಅಗತ್ಯ ದಾಖಲೆ ಪರಿಶೀಲಿಸಿ, ನಿಗದಿತ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕವೇ ವಿತರಿಸಲಾಗುತ್ತದೆ. ದಾಖಲಾತಿಗಳಿಲ್ಲದೆ ಯಾವುದೇ ರಕ್ತ ಅಥವಾ ರಕ್ತ ಘಟಕವನ್ನು ವಿತರಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ.
ಅದೇ ರೀತಿ, ಬ್ಲಡ್ ಸ್ಟೋರೇಜ್ ಯುನಿಟ್ ನಿರ್ವಹಿಸುತ್ತಿರುವ ಆದರ್ಶ ಆಸ್ಪತ್ರೆಗೂ ಸರ್ಕಾರದ ಮಾರ್ಗಸೂಚಿ ಪ್ರಕಾರವೇ ರಕ್ತವನ್ನು ವಿತರಿಸಲಾಗಿದ್ದು, ಆ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಹರಡುತ್ತಿರುವ ಸುದ್ದಿಗಳು ಸಂಪೂರ್ಣ ಸುಳ್ಳು.
ಸುಳ್ಳು ಮಾಹಿತಿ ಹರಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಉಡುಪಿ ನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದ್ದು, ಪ್ರಕರಣದ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ.
ಸಾರ್ವಜನಿಕರು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಆಧಾರ ರಹಿತ ಮಾಹಿತಿಯನ್ನು ನಂಬದೆ, ಜಿಲ್ಲಾಸ್ಪತ್ರೆ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸದಂತೆ ಮನವಿ ಮಾಡಿರುವ ಆಸ್ಪತ್ರೆ ಆಡಳಿತ, ನೈಜ ಮಾಹಿತಿಯನ್ನೇ ಪ್ರಕಟಿಸುವಂತೆ ಮಾಧ್ಯಮಗಳಿಗೂ ಜಿಲ್ಲಾ ಸರ್ಜನ್ ಡಾ.ಅಶೋಕ್ ವಿನಂತಿಸಿದ್ದಾರೆ.