ಎಸ್ಎಎಫ್ ರಚನೆ ಉದ್ದೇಶ ಸ್ಪಷ್ಟಪಡಿಸಿ

ಲೋಕಬಂಧು ನ್ಯೂಸ್ | ಉಡುಪಿ, ಜು.11
ದಕ್ಷಿಣ ಕನ್ನಡ, ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ 2026ರ ಜೂನ್ ತಿಂಗಳಿಂದ ಅಸ್ತಿತ್ವಕ್ಕೆ ಬಂದಿರುವ ವಿಶೇಷ ರಕ್ಷಣಾ ಪಡೆ (ಎಸ್ಎಎಫ್)ಯನ್ನು ಮುಂದುವರಿಸಲು ಇರುವ ಕಾನೂನುಬದ್ಧ ಮಾನ್ಯತೆಯನ್ನು ರಾಜ್ಯ ಸರ್ಕಾರ ಸಾರ್ವಜನಿಕವಾಗಿ ಸ್ಪಷ್ಟಪಡಿಸಬೇಕು ಎಂದು ಸಮಾಜ ಸೇವಕಿ, ಮಾಜಿ ಡಿವೈಎಸ್ಪಿ ಹಾಗೂ ಭಾರತೀಯ ಜನಶಕ್ತಿ ಕಾಂಗ್ರೆಸ್‌ನ ಅನುಪಮ ಶೆಣೈ ಒತ್ತಾಯಿಸಿದ್ದಾರೆ.
ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ನಕ್ಸಲ್ ಚಟುವಟಿಕೆ ನಿಯಂತ್ರಣದಲ್ಲಿದೆ ಎಂದು ಹೇಳುತ್ತಿರುವ ಸರ್ಕಾರ ದಕ್ಷಿಣ ಕನ್ನಡ, ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಎಸ್ಎಎಫ್ ನ್ನು ಮುಂದುವರಿಸುವ ಅಗತ್ಯವೇನು ಎಂದು ಪ್ರಶ್ನಿಸಿದರು.


ಎಎನ್ಎಫ್ ಸಿಬಂದಿ‌‌ ಮೊಟಕು
2026ರ ಜೂನ್ ತಿಂಗಳಲ್ಲಿ ನಕ್ಸಲ್ ನಿಗ್ರಹ ದಳ (ಎಎನ್ಎಫ್) ಸಿಬ್ಬಂದಿಯನ್ನು ಮೊಟಕುಗೊಳಿಸಿ ಎಸ್ಎಎಫ್ ರಚಿಸಲಾಗಿದೆ. ಆದರೆ, ಈ ವಿಶೇಷ ಕಾರ್ಯಪಡೆಯನ್ನು ಯಾವ ಕಾನೂನಿನಡಿ ಸ್ಥಾಪಿಸಲಾಗಿದೆ ಎಂಬುದನ್ನು ಸರ್ಕಾರ ಇದುವರೆಗೆ ಬಹಿರಂಗಪಡಿಸಿಲ್ಲ. ಹಾಗಾಗಿ ಎಸ್ಎಎಫ್'ಗಿರುವ ಕಾನೂನುಬದ್ಧ ಮಾನ್ಯತೆ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾ‌ರ್ ಅವರು ಸ್ಪಷ್ಟ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.


ಈ ಹಿಂದೆ ಉಪಮುಖ್ಯಮಂತ್ರಿಯಾಗಿದ್ದ ಡಿ.ಕೆ. ಶಿವಕುಮಾರ್ ಅವರು ಕರಾವಳಿ ಭಾಗದ ಜನತೆ ಕಾಂಗ್ರೆಸ್‌ಗೆ ಮತ ಹಾಕುವುದಿಲ್ಲ ಎಂಬರ್ಥದಲ್ಲಿ ಮಾತನಾಡಿದ್ದರು. ಹಾಗಿದ್ದರೆ ಈಗ ಕರಾವಳಿ ಭಾಗಕ್ಕೇ ವಿಶೇಷ ಕಾರ್ಯಪಡೆ ನೀಡಿರುವ ಉದ್ದೇಶವೇನು ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ ಎಂದ ಅನುಪಮ ಶೆಣೈ, ಎಸ್ಎಎಫ್ ರಚನೆಯಾದ ಕೆಲವೇ ದಿನಗಳಲ್ಲಿ ಚಿನ್ನಯ್ಯ ಬುರುಡೆ ಪ್ರಕರಣ ಬೆಳಕಿಗೆ ಬಂತು. ಆ ಪ್ರಕರಣದ ತನಿಖೆಗೆ ಎಸ್ಎಎಫ್ ಇದ್ದೂ ಸರ್ಕಾರ ವಿಶೇಷ ತನಿಖಾ ದಳ (ಎಸ್ಐಟಿ) ರಚಿಸಿತು. ಆದರೆ, ಎಸ್ಎಎಫ್'ನ್ನು ಯಾವ ಉದ್ದೇಶಕ್ಕಾಗಿ ರಚಿಸಲಾಗಿದೆ? ಇದು ಕೇವಲ ಕಾನೂನು-ಸುವ್ಯವಸ್ಥೆ ಕಾಪಾಡಲು ಸ್ಥಾಪಿತವಾದ ಪಡೆಯೇ ಅಥವಾ ಬೇರೆ ಕಾರಣಗಳಿವೆಯೇ ಎಂಬುದನ್ನು ಸರ್ಕಾರ ಸ್ಪಷ್ಟಪಡಿದಬೇಕು ಎಂದರು.


ಬುರುಡೆ ಗ್ಯಾಂಗ್ ರಕ್ಷಣೆಗೆ ಎಸ್ಎಎಫ್?
ಚಿನ್ನಯ್ಯ ಬುರುಡೆ ಪ್ರಕರಣದ ನಂತರ ಪರಿಸ್ಥಿತಿ ಬದಲಾಗಿದೆ. ಹಾಗಿದ್ದರೂ ಕರಾವಳಿ ಭಾಗದಲ್ಲಿ ಎಸ್ಎಎಫ್'ನ್ನು ಮುಂದುವರಿಸಿರುವ ಅಗತ್ಯ ಏನು? ಬುರುಡೆ ಗ್ಯಾಂಗಿಗೆ ಭದ್ರತೆ ಒದಗಿಸಲೆಂದೇ ಈ ಪಡೆಯನ್ನು ಸ್ಥಾಪಿಸಲಾಗಿದೆಯೇ ಎಂದು ಅನುಪಮ ಪ್ರಶ್ನಿಸಿದರು.


ಸಾರ್ವಜನಿಕರ ತೆರಿಗೆ ಹಣದಿಂದ ಈ ವಿಶೇಷ ಪಡೆಯನ್ನು ನಿರ್ವಹಿಸಲಾಗುತ್ತಿದೆ. ಅದರ ಅಗತ್ಯವೇ ಇಲ್ಲದಿದ್ದರೆ ಎಸ್ಎಎಫ್'ನ್ನು ವಿಸರ್ಜಿಸಿ ಆ ವೆಚ್ಚವನ್ನು ಜನರ ಅಭಿವೃದ್ಧಿ ಹಾಗೂ ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಬಳಸುವುದು ಸೂಕ್ತ ಎಂದವರು ಸಲಹೆ ನೀಡಿದ್ದಾರೆ.


ಎಸ್ಎಎಫ್ ರಚನೆಗಿರುವ ಕಾನೂನುಬದ್ಧ ಆಧಾರವನ್ನು ಸರ್ಕಾರ ಸಾರ್ವಜನಿಕವಾಗಿ ತಿಳಿಸಬೇಕು. ಇಲ್ಲವಾದಲ್ಲಿ ಈ ಪಡೆಯ ರಚನೆ ಕುರಿತು ಮೂಡಿರುವ ಅನುಮಾನಗಳಿಗೆ ಸರ್ಕಾರವೇ ಉತ್ತರಿಸಬೇಕಾಗುತ್ತದೆ ಎಂದೂ ಅನುಪಮ ಶೆಣೈ ಹೇಳಿದರು.