ಧರ್ಮಸ್ಥಳ ವಿರುದ್ಧ ಷಡ್ಯಂತ್ರ: ಕಠಿಣ ಕಾನೂನು ಕ್ರಮಕ್ಕೆ ಆಗ್ರಹ

ಲೋಕಬಂಧು ನ್ಯೂಸ್ | ಉಜಿರೆ, ಜು.10
ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ವಿರುದ್ಧ ಷಡ್ಯಂತ್ರ ರೂಪಿಸಿ ಜಾಗತಿಕ ಮಟ್ಟದಲ್ಲಿ ಅಪಪ್ರಚಾರ ಹಾಗೂ ವದಂತಿಗಳನ್ನು ಪಸರಿಸಿ ಕಳಂಕವನ್ನುಂಟು ಮಾಡಿದ ಪ್ರಕರಣವನ್ನು ಖಂಡಿಸಿ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿ ಬೆಂಗಳೂರಿನ ಅತಿ ಹಿಂದುಳಿದ ಮಠಾಧೀಶರ ಮಹಾಸಭಾ ವತಿಯಿಂದ ಶುಕ್ರವಾರ ಕೋರ್ ಕಮಿಟಿಯ ಏಳು ಮಂದಿ ಸದಸ್ಯರು ಧರ್ಮಸ್ಥಳಕ್ಕೆ ಆಗಮಿಸಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಗೆ ತಮ್ಮ ಬೆಂಬಲ ಪತ್ರ ಅರ್ಪಿಸಿದರು.
ಮಹಾಸಭಾದ ಮುಖ್ಯಸ್ಥ ಡಾ.ಪ್ರಣವಾನಂದ ರಾವ್ ಮಹಾಸ್ವಾಮೀಜಿ ನೇತೃತ್ವದಲ್ಲಿ ಆಗಮಿಸಿದ ಸದಸ್ಯರು ಜೂನ್ 27 ಮತ್ತು 28ರಂದು ಕಲ್ಬುರ್ಗಿಯಲ್ಲಿ ನಡೆದ ಚಿಂತನಾ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರದಂತೆ ಧರ್ಮಸ್ಥಳದ ಕಳಂಕ ನಿವಾರಿಸಿ ಪಾವಿತ್ರ್ಯ ರಕ್ಷಣೆಗೆ ತಮ್ಮ ಪೂರ್ಣ ಬೆಂಬಲ ನೀಡುವ ಬಗ್ಗೆ ಪತ್ರವನ್ನು ಹೆಗ್ಗಡೆಯವರಿಗೆ ಸಲ್ಲಿಸಿದರು.


ಡಾ. ಹೆಗ್ಗಡೆಯವರಿಗೆ ದೇವರು ಪೂರ್ಣ ಆರೋಗ್ಯ ಭಾಗ್ಯ ನೀಡಿ ನಿರಂತರ ಸೇವಾ ಕಾರ್ಯ ಮುಂದುವರಿಸುವಂತೆ ಹರಸಲಿ ಎಂದು ಪ್ರಾರ್ಥಿಸಿದರು.


ಷಡ್ಯಂತ್ರ ರೂಪಿಸಿದ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಸದ್ಯದಲ್ಲೇ ರಾಜ್ಯದ ಮುಖ್ಯಮಂತ್ರಿಯನ್ನು ಭೇಟಿಯಾಗಿ ಒತ್ತಾಯಿಸುವುದಾಗಿ ಸ್ವಾಮೀಜಿ ತಿಳಿಸಿದರು.


ಭಕ್ತರ ಸಮಾವೇಶ
ಸುಮಾರು ಇನ್ನೂರು ಮಂದಿ ಸ್ವಾಮೀಜಿಗಳ ನೇತೃತ್ವದಲ್ಲಿ ಧರ್ಮಸ್ಥಳಕ್ಕೆ ಪಾದಯಾತ್ರೆಯಲ್ಲಿ ಸಾವಿರಾರು ಮಂದಿ ಬಂದು ಭಕ್ತರ ಸಮಾವೇಶ ನಡೆಸಲಾಗುವುದು. ಆ ಬಗ್ಗೆ ಡಾ. ಹೆಗ್ಗಡೆಯವರಲ್ಲಿಯೂ ಪ್ರಸ್ತಾಪಿಸಿದ್ದು ಮುಂದೆ ಸೂಕ್ತ ಸಿದ್ಧತೆ ನಡೆಸಲಾಗುವುದು ಎಂದವರು ತಿಳಿಸಿದರು.
ಈ ಸಂದರ್ಭದಲ್ಲಿ ಡಾ. ಹೆಗ್ಗಡೆಯವರನ್ನು ಮಹಾಸಭಾ ವತಿಯಿಂದ ಗೌರವಿಸಲಾಯಿತು.


ಬಳಿಕ ದೇವರ ದರ್ಶನ ಮಾಡಿ ವಿಶೇಷ ಪೂಜೆ ಸಲ್ಲಿಸಿ, ಪ್ರಸಾದ ಸ್ವೀಕರಿಸಿದ ಬಳಿಕ ಸ್ವಾಮೀಜಿಯವರು ಬೆಂಗಳೂರಿಗೆ ಪ್ರಯಾಣಿಸಿದರು.