ಲೋಕಬಂಧು ನ್ಯೂಸ್ | ಉಡುಪಿ, ಜು.12
ತಮ್ಮ ವೈಯಕ್ತಿಕ ಬದುಕಿಗಿಂತ ಸಮಾಜದ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿ, ನಿಸ್ವಾರ್ಥ ಸೇವೆಯಿಂದ ಅನೇಕ ಜೀವಗಳನ್ನು ಉಳಿಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ವೈದ್ಯರ ಪಾತ್ರ ಅತ್ಯಂತ ಹಿರಿದಾದುದು ಎಂದು ರಾಜ್ಯ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಫರೀದ್ ಅಭಿಪ್ರಾಯ ವ್ಯಕ್ತಪಡಿಸಿದರು.
ಭಾನುವಾರ ನಗರದ ಶೋಕಮಾತಾ ಚರ್ಚ್'ನ ಆವೆ ಮರಿಯಾ ಸಭಾಂಗಣದಲ್ಲಿ ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಆರೋಗ್ಯ ಆಯೋಗದ ವತಿಯಿಂದ ಆಯೋಜಿಸಿದ್ದ ಎರಡನೇ ವರ್ಷದ ವೈದ್ಯರ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರತಿಯೊಬ್ಬ ವೈದ್ಯರು ಕೂಡಾ ಜಗತ್ತಿನಲ್ಲಿ ಕ್ರಾಂತಿಕಾರಕ ಬದಲಾವಣೆ ತರಲು ಸಾಧ್ಯವಿದ್ದು ಪ್ರತಿಯೊಬ್ಬ ರೋಗಿಯ ಗೌರವಕ್ಕೆ ಧಕ್ಕೆಯಾಗದಂತೆ ಸೇವೆ ನೀಡಬೇಕಾದ ಜವಾಬ್ದಾರಿ ಅವರ ಮೇಲಿದೆ. ವೈದ್ಯ ವೃತ್ತಿ ಅತ್ಯಂತ ಪವಿತ್ರ ಹಾಗೂ ಗೌರವಯುತವಾಗಿದ್ದು, ವೈದ್ಯರು ಜನರಲ್ಲಿ ಉತ್ತಮ ಆಹಾರ ಪದ್ಧತಿ ಕುರಿತು ಜಾಗೃತಿ ಮೂಡಿಸುವ ಕೆಲಸ ನಡೆದಲ್ಲಿ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ. ಈ ನಿಟ್ಟಿನಲ್ಲಿ ವೈದ್ಯ ಸಮುದಾಯ ಹೆಚ್ಚು ಆಸಕ್ತಿ ತೋರಬೇಕು ಎಂದರು.
ಮುಖ್ಯ ಅತಿಥಿಯಾಗಿ, ಕಾರ್ಯಕ್ರಮ ಉದ್ಘಾಟಿಸಿದ ಮಣಿಪಾಲ ಮಾಹೆ ಸಹಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ಮಾತನಾಡಿ, ಹಿಂದುಳಿದವರು ಹಾಗೂ ಬಡವರನ್ನು ಶೈಕ್ಷಣಿಕ ಮತ್ತು ಆರೋಗ್ಯ ಸೇವೆಯ ಮೂಲಕ ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ನಡೆಯಬೇಕಾಗಿದ್ದು, ಈ ನಿಟ್ಟಿನಲ್ಲಿ ಮಾಹೆ ಕಳೆದ ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಬಡವರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ತೋರುತ್ತಿರುವ ಸಂಸ್ಥೆ, ಆರೋಗ್ಯ ಕಾರ್ಡ್ ಮೂಲಕ ರಿಯಾಯತಿ ದರದ ಸೇವೆ ನೀಡುತ್ತಿದ್ದು ಅದನ್ನು ಪ್ರತಿಯೊಬ್ಬರಿಗೂ ಲಭಿಸುವಂತೆ ನೋಡಿಕೊಂಡಿದ್ದೇವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಉಡುಪಿ ಬಿಷಪ್ ವಂ.ಡಾ.ಲೆಸ್ಲಿ ಕ್ಲಿಫರ್ಡ್ ಡಿ'ಸೋಜಾ, ವೈದ್ಯಕೀಯ ವೃತ್ತಿ ಕೇವಲ ಉದ್ಯೋಗವಲ್ಲ; ಬದಲಿಗೆ ಅದೊಂದು ಪವಿತ್ರ ಹಾಗೂ ಮಹಾನ್ ಸೇವೆಯಾಗಿದೆ. ಹಗಲಿರುಳೂ ರೋಗಿಗಳ ಸೇವೆ ಮಾಡುವ ವೈದ್ಯರು ಸಮಾಜದ ಬೆನ್ನೆಲೆಬಾಗಿದ್ದಾರೆ ಎಂದರು.
ಧರ್ಮಪ್ರಾಂತ್ಯದ ಆರೋಗ್ಯ ಆಯೋಗದ ಮೂಲಕ ಸಂತೆಕಟ್ಟೆ ಗೊರೆಟ್ಟಿ ಆಸ್ಪತ್ರೆಯಲ್ಲಿ ನೂತನ ದಂತ ಚಿಕಿತ್ಸಾ ವಿಭಾಗ ಹಾಗೂ ಮಧುಮೇಹ ತಪಾಸಣಾ ಘಟಕದ ಉದ್ಘಾಟನೆ ನೆರವೇರಿಸಲಾಯಿತು. ಎರಡು ಆರೋಗ್ಯ ಸಂಸ್ಥೆಗಳಿಗೆ ಇಸಿಜಿ ಯಂತ್ರಗಳನ್ನು ಈ ಸಂದರ್ಭದಲ್ಲಿ ಹಸ್ತಾಂತರಿಸಲಾಯಿತು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕಿ ಡಾ.ಜೆಸಿಂತಾ ಡಿ'ಸೋಜಾ ದಿಕ್ಸೂಚಿ ಭಾಷಣ ಮಾಡಿದರು.
ಇದೇ ಸಂದರ್ಭದಲ್ಲಿ 2027ನೇ ಸಾಲಿನ ಮಣಿಪಾಲ ಆರೋಗ್ಯ ಸುರಕ್ಷಾ ಕಾರ್ಡ್ ನೊಂದಣಿ ಅಭಿಯಾನಕ್ಕೆ ಡಾ.ಎಚ್.ಎಸ್.ಬಲ್ಲಾಳ್ ಚಾಲನೆ ನೀಡಿದರು. ವಲಯಗಳ ನಿರ್ದೇಶಕರು ಹಾಗೂ ಸಂಚಾಲಕರು, ಸಂಪನ್ಮೂಲ ವ್ಯಕ್ತಿಗಳನ್ನು ಗೌರವಿಸಲಾಯಿತು.
ಧರ್ಮಪ್ರಾಂತ್ಯದ ನಿವೃತ್ತ ಬಿಷಪ್ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ, ಕುಲಪತಿ ವಂ.ಸ್ಟೀಫನ್ ಡಿ'ಸೋಜಾ, ಆರೋಗ್ಯ ಇಲಾಖೆಯ ಡಾ.ನಾಗರತ್ನ ಶಾಸ್ತ್ರಿ, ಉಡುಪಿ ಶೋಕಮಾತಾ ಚರ್ಚ್'ನ ಸಹಾಯಕ ಧರ್ಮಗುರು ವಂ.ಲಿಯೊ ಪ್ರವೀಣ್ ಡಿ'ಸೋಜಾ ಮೊದಲಾದವರಿದ್ದರು.
ಆರೋಗ್ಯ ಆಯೋಗದ ನಿರ್ದೇಶಕಿ ಹಿಲ್ಡಾ ಕರ್ನೇಲಿಯೊ ಸ್ವಾಗತಿಸಿ, ಕಾರ್ಯದರ್ಶಿ ಡಾ.ರೆನ್ ಡಯಾಸ್ ವಂದಿಸಿದರು. ಡಾ.ಸೋನಿ ಡಿ'ಕೋಸ್ತಾ ನಿರೂಪಿಸಿದರು.
.jpg)
.jpg)