ಲೋಕಬಂಧು ನ್ಯೂಸ್ | ಉಡುಪಿ, ಜು.11
ಪರಿಶುದ್ಧ ಸಂದೇಶ ನೀಡುವುದಾದರೆ ಹೊಸ ಪ್ರಸಂಗಗಳನ್ನು ಪ್ರಯೋಗ ಮಾಡುವುದರಲ್ಲಿ ತಪ್ಪಿಲ್ಲ. ಎಲ್ಲವನ್ನೂ ಸ್ವೀಕರಿಸುವುದು ಕಲೆಯ ಮನೋಧರ್ಮ. ಆ ಮೂಲಕ ತನ್ನತನವನ್ನೂ ಅದು ಉಳಿಸಿಕೊಳ್ಳುತ್ತದೆ ಎಂದು ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್‌ನ ನಿರ್ದೇಶಕ ಮೋಹನ ಭಾಸ್ಕರ ಹೆಗಡೆ ಅಭಿಪ್ರಾಯ ವ್ಯಕ್ತಪಡಿಸಿದರು.
ಯಕ್ಷಗಾನ ಕಲಾರಂಗ ವತಿಯಿಂದ ನಗರದ ಐವೈಸಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಲಾರಂಗ ಪ್ರಶಸ್ತಿ ಪ್ರದಾನ ಮತ್ತು ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಯೋಗಶೀಲತೆ ಪ್ರತಿಯೊಬ್ಬ ಕಲಾವಿದನ ಮೂಲಭೂತ ಗುಣಧರ್ಮ. ಕಲಾವಿದನಿಗೂ ಮನೋಧರ್ಮ ಇರುತ್ತದೆ. ವಾದನಕ್ಕೂ ಮನೋಧರ್ಮ ಇರುತ್ತದೆ. ವಾದನ ನಿರ್ಜೀವವಾದುದಲ್ಲ ಎಂದರು.
ವಿದ್ವಾಂಸ ಡಾ.ತಾಳ್ತಜೆ ವಸಂತಕುಮಾರ್ ಮಾತನಾಡಿ, ರಂಗಕ್ಕೆ ವೇಷ ಬರುವುದು ಎಂದರೆ ಅದು ಸಮಸ್ತ ಜನರ ಅಂತರಂಗಕ್ಕೆ ಏಕಕಾಲಕ್ಕೆ ಬರುವುದಾಗಿದೆ. ಇದು ವೇಷದ ಭಾಷೆಯಾದರೆ, ಅರ್ಥಗಾರಿಕೆ ಮೂಲಕ ಜನರ ಪಂಚೇಂದ್ರಿಯಕ್ಕೆ ವಿಚಾರದ ಸಿದ್ಧಿಯನ್ನು ಒದಗಿಸುವುದು ದೊಡ್ಡ ಸಾಧನೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಾನವ ಹಕ್ಕುಗಳ ಆಯೋಗದ ಸದಸ್ಯ ಡಾ.ಟಿ. ಶ್ಯಾಮ್ ಭಟ್, ಕಲಾವಿದರ ಯೋಗಕ್ಷೇಮಕ್ಕಾಗಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂಬ ಮನೋಭಾವವಿರುವ ಪ್ರತಿಯೊಬ್ಬರೂ ಕಲಾರಂಗಕ್ಕೆ ಆಭಾರಿಯಾಗಿರುತ್ತಾರೆ ಎಂದರು.
ಪ್ರಶಸ್ತಿ ಸ್ಥಾಪನೆ
ಮುಂದಿನ ವರ್ಷದಿಂದ ಕೀರ್ತಿಶೇಷರಾದ ಹಿರಿಯ ಯಕ್ಷಗಾನ ಕಲಾವಿದರಾದ ಶೇಣಿ ಗೋಪಾಲಕೃಷ್ಣ ಭಟ್ ಮತ್ತು ಸೂರಿಕುಮೇರು ಗೋವಿಂದ ಭಟ್ ಹೆಸರಿನಲ್ಲಿ ಕಲಾರಂಗದ ಮೂಲಕ ಪ್ರಶಸ್ತಿ ನೀಡುವುದಾಗಿ ಡಾ.ಶ್ಯಾಮ್ ಭಟ್ ಪ್ರಕಟಿಸಿದರು.
ಸಾಮಾಜಿಕ ಧುರೀಣ ಕೃಷ್ಣಪ್ರಸಾದ ಅಡ್ಯಂತಾಯ ಅಭ್ಯಾಗತರಾಗಿದ್ದರು. ಕಲಾರಂಗದ ಉಪಾಧ್ಯಕ್ಷರಾದ ಪಳ್ಳಿ ಕಿಶನ್ ಹೆಗ್ಡೆ ಮತ್ತು ವಿ.ಜಿ. ಶೆಟ್ಟಿ, ಕೋಶಾಧಿಕಾರಿ ಸದಾಶಿವ ರಾವ್ ಇದ್ದರು.
ಯಕ್ಷಗಾನ ಕಲಾರಂಗ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ನಿರೂಪಿಸಿದರು. ನಾರಾಯಣ ಹೆಗಡೆ ವಂದಿಸಿದರು.
ಪ್ರಶಸ್ತಿ ಪ್ರದಾನ
ಈ ಸಂದರ್ಭದಲ್ಲಿ ಹೊರನಾಡು ಡಿ.ಬಿ. ವೆಂಕಟಸುಬ್ಬಾ ಜೋಯಿಸ್ ಪ್ರಶಸ್ತಿಯನ್ನು ವೆಂಕಟರಾಮ ಭಟ್ಟ ಸುಳ್ಯ ಅವರಿಗೆ, ಮಟ್ಟಿ ಮುರಲೀಧರ ರಾವ್ ಪ್ರಶಸ್ತಿಯನ್ನು ಹೊನ್ನಾವರದ ಜಿ.ಕೆ. ಹೆಗಡೆ ಅವರಿಗೆ ಹಾಗೂ ಪೆರ್ಲ ಕೃಷ್ಣ ಭಟ್ ಪ್ರಶಸ್ತಿಯನ್ನು ಕಾರ್ಕಳದ ಕೋಟೆ ರಾಮ ಭಟ್ ಅವರಿಗೆ ಪ್ರದಾನ ಮಾಡಲಾಯಿತು.
ತಾಳಮದ್ದಲೆ
ಅದಕ್ಕೂ ಮುನ್ನ ಶ್ರೀರಂಗ ತುಲಾಭಾರ ತಾಳಮದ್ದಲೆ ನಡೆಯಿತು. ಹಿಮ್ಮೇಳದಲ್ಲಿ ಕಾವ್ಯಶ್ರೀ ಅಜೇರು, ಕೃಷ್ಣಪ್ರಕಾಶ ಉಳಿತ್ತಾಯ ಮತ್ತು ಚಂದ್ರಶೇಖರ ಆಚಾರ್ಯ, ಅರ್ಥದಾರಿಗಳಾಗಿ ವಾಸುದೇವ ರಂಗಾ ಭಟ್, ರಾಧಾಕೃಷ್ಣ ಕಲ್ಚಾರ್, ಪವನ ಕಿರಣಕೆರೆ ಮತ್ತು ಪ್ರದೀಪ ವಿ. ಸಾಮಗ ಪಾಲ್ಗೊಂಡಿದ್ದರು.
