10 ಲಕ್ಷ ಸಾಲ ಪಡೆದು ಮರಳಿಸದೆ ವಂಚನೆ

ಲೋಕಬಂಧು ನ್ಯೂಸ್ | ಉಡುಪಿ, ಜು.8
ಉದ್ಯೋಗದ ನಿಮಿತ್ತ ಪರಿಚಯವಾಗಿದ್ದ ವ್ಯಕ್ತಿಯಿಂದ 10 ಲಕ್ಷ ರೂ. ಸಾಲ ಪಡೆದು ವಾಪಸ್ ನೀಡದೇ ವಂಚಿಸಿದ ಆರೋಪದಡಿ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಅಂಬಲಪಾಡಿ ಗ್ರಾಮದ ಸಜ್ಜನ್ ಶೆಟ್ಟಿ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.


ಸಜ್ಜನ್‌ ಶೆಟ್ಟಿಗೆ ಸಿದ್ದಾರ್ಥ ಶೆಟ್ಟಿ ಎಂಬವರ ಪರಿಚಯವಾಗಿದ್ದು, ಬಳಿಕ ಅವರ ತಂದೆ ಅಮರನಾಥ್ ಶೆಟ್ಟಿ, ತಾಯಿ ಚಂದ್ರಕಲಾ ಎ. ಶೆಟ್ಟಿ, ಮಲ್ಲಿಕಾ ಶೆಟ್ಟಿ, ಪ್ರಜ್ವಲ್ ಶೆಟ್ಟಿ ಹಾಗೂ ಸದಾಶಿವ ಶೆಟ್ಟಿ ಪರಿಚಯವೂ ಆಗಿತ್ತು. ಸಿದ್ದಾರ್ಥ ಶೆಟ್ಟಿಗೆ ಹಣದ ಅವಶ್ಯಕತೆ ಇದೆ ಎಂದು ಹೇಳಿ, ಆರೋಪಿಗಳೆಲ್ಲರೂ ಸೇರಿ 10,ಲ ಲಕ್ಷ ರೂ. ಸಾಲ ನೀಡುವಂತೆ ಮನವಿ ಮಾಡಿದ್ದರು.


ಐದು ತಿಂಗಳೊಳಗೆ ಸಂಪೂರ್ಣ ಹಣ ಹಿಂದಿರುಗಿಸುವುದಾಗಿ ಭರವಸೆ ನೀಡಿದ್ದರಿಂದ ದೂರುದಾರರು ಹಣ ನೀಡಿದ್ದರು.


ನಂತರ ಹಣವನ್ನು ವಾಪಸ್ ಕೇಳಿದಾಗ ಆರೋಪಿಗಳು ವಿವಿಧ ಕಾರಣ ನೀಡಿ ತಪ್ಪಿಸಿಕೊಳ್ಳುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಬಳಿಕ ಆರೋಪಿಗಳು ಕೊಟಕ್ ಮಹೀಂದ್ರ ಬ್ಯಾಂಕ್ ಖಾತೆಯ ಚೆಕ್ ನೀಡಿದ್ದು, ಅದನ್ನು ಬ್ಯಾಂಕಿಗೆ ಜಮಾ ಮಾಡಿದಾಗ ಖಾತೆಯಲ್ಲಿ ಸಾಕಷ್ಟು ಹಣವಿರಲಿಲ್ಲ. ಈ ವಿಚಾರವನ್ನು ಪ್ರಶ್ನಿಸಿದಾಗ ಆರೋಪಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.


ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ‌ನಡೆಯುತ್ತಿದೆ.