ಲೋಕಬಂಧು ನ್ಯೂಸ್ | ಉಡುಪಿ, ಜು.12
ಇಲ್ಲಿನ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಆಶ್ರಯದಲ್ಲಿ ಕವಿ, ಸ್ವಾತಂತ್ರ್ಯ ಸೇನಾನಿ, ನಾಡೋಜ ಡಾ.ಕಯ್ಯಾರ ಕಿಂಞ್ಞಣ್ಣ ರೈ ಅವರ ಸಮಗ್ರ ಸಂಪುಟ ಪ್ರಕಟವಾಗಲಿದೆ. ಕಯ್ಯಾರರ ಕಥೆ, ಶಿಶುಗೀತೆ, ಕವನ, ನಾಟಕ, ಪಠ್ಯಪುಸ್ತಕ, ವ್ಯಾಕರಣ, ಆತ್ಮಕಥನ, ಜೀವನ ಚರಿತ್ರೆ, ಸಂಸ್ಕೃತ ಭಾಷಾಂತರ ರೂಪದ 37ಕ್ಕೂ ಹೆಚ್ಚು ಪುಸ್ತಕ, ಬಿಡಿ ಲೇಖನ ಇತ್ಯಾದಿಗಳೆಲ್ಲವನ್ನೂ ಕ್ರೋಢೀಕರಿಸಿ `ಕಯ್ಯಾರರ ಸಮಗ್ರ ಸಂಪುಟ'ವನ್ನು ರಚಿಸುವ ಯೋಜನೆಯಿದೆ.
ಕಯ್ಯಾರರು ಬರೆದ ಬಿಡಿ ಲೇಖನ, ಭಾವಚಿತ್ರ, ಭಾಗವಹಿಸಿದ ಸಭೆ ಸಮಾರಂಭಗಳ ಆಮಂತ್ರಣ ಪತ್ರಿಕೆ, ಪತ್ರಿಕಾ ತುಣುಕುಗಳು, ಅವರ ಕುರಿತ ಲೇಖನಗಳು, ಕವಿತೆಗಳು, ಸಂಶೋಧನಾ ಪ್ರಬಂಧಗಳು ಮತ್ತು ಅವರ ಯಾವುದೇ ಸಾಹಿತ್ಯಿಕ, ಏಕೀಕರಣದ ಹೋರಾಟ, ಸಾಮಾಜಿಕ ಕಾರ್ಯಕ್ರಮಗಳ ಮುದ್ರಿತ ಅಥವಾ ಹಸ್ತಲಿಖಿತ ಬರಹಗಳಿದ್ದಲ್ಲಿ ಕಯ್ಯಾರ ಸಂಪುಟ ಸಮಿತಿ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧಕ ಕೇಂದ್ರ, ಎಂಜಿಎಂ ಕಾಲೇಜು ಉಡುಪಿ ಈ ವಿಳಾಸಕ್ಕೆ ಕಳಿಸಿಕೊಡುವಂತೆ ಪ್ರಕಟಣೆ ತಿಳಿಸಿದೆ.
