ತರಾತುರಿಯ ಪಿಸಿಆರ್ ಜಾರಿಯಲ್ಲಿ ದುರುದ್ದೇಶದ ಹುನ್ನಾರ

ಲೋಕಬಂಧು ನ್ಯೂಸ್ | ದಾವಣಗೆರೆ, ಜು.11
ರಾಜ್ಯದಲ್ಲಿ ಬರಡು ಹಸ್ತವಾಗಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರ ಪಿಸಿಆರ್ (ಶಾಶ್ವತ ಸಮುದಾಯ ನೋಂದಣಿ ಅಥವಾ ಜಾತಿ ಮತ್ತು ನಿವಾಸಿಗಳ ನೋಂದಣಿ ಪ್ರಕ್ರಿಯೆ) ಜಾರಿಗೆ ತೋರುತ್ತಿರುವ ತರಾತುರಿಯ ಹಿಂದೆ ದೊಡ್ಡ ದುರುದ್ದೇಶ ಅಡಗಿದೆ ಎಂದು ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ವಿ. ಸುನಿಲ್‌ ಕುಮಾರ್ ಆರೋಪಿಸಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರು ಈ ನೆಲದ ಮೂಲ ನಿವಾಸಿಗಳಲ್ಲವೋ, ಅಂಥವರನ್ನು ಸಕ್ರಮ ಮಾಡುವ ವ್ಯವಸ್ಥಿತ ಹುನ್ನಾರ ಈ ಪಿಸಿಆರ್ ಜಾರಿಯ ಹಿಂದೆ ಅಡಗಿದೆ ಎಂಬ ಬಲವಾದ ಅನುಮಾನ ಮೂಡುತ್ತಿದೆ. ಸರ್ಕಾರ ಇಷ್ಟೊಂದು ತರಾತುರಿಯಲ್ಲಿ ಈ ಪ್ರಕ್ರಿಯೆಗೆ ಮುಂದಾಗುತ್ತಿರುವುದರ ಹಿಂದಿನ ರಹಸ್ಯವೇನು ಎಂದವರು ಪ್ರಶ್ನಿಸಿದರು.


ಯೋಗ್ಯತೆ ಇಲ್ಲದ ಸರ್ಕಾರ
ಬಡವರಿಗೆ ರೇಷನ್ ಕಾರ್ಡ್ ಇಲ್ಲ, ಮನೆಗಳಿಲ್ಲ. 2023ರಿಂದ 2026ರ ವರೆಗೆ ಕಳೆದ ಮೂರು ವರ್ಷಗಳಲ್ಲಿ ಬಡವರಿಗೆ ಒಂದೇ ಒಂದು ಹೊಸ ರೇಷನ್ ಕಾರ್ಡ್ ಅಥವಾ ಮನೆ ನೀಡಲು ಈ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಬಡವರ ಹೊಟ್ಟೆ ತುಂಬಿಸುವ ರೇಷನ್ ಕಾರ್ಡ್ ಕೊಡಲು ಯೋಗ್ಯತೆ ಇಲ್ಲದ ಸರ್ಕಾರಕ್ಕೆ ಈಗ ಪಿಸಿಆರ್ ಜಾರಿಗೆ ತರಲು ಇಷ್ಟೊಂದು ಆಸಕ್ತಿ ಏಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಸರ್ಕಾರದ ದುರುದ್ದೇಶ ಬಯಲು
ಮೂಲಭೂತ ಸೌಕರ್ಯಗಳನ್ನು ಒದಗಿಸಲು ವಿಫಲವಾಗಿರುವ ಸರ್ಕಾರ, ಕೇವಲ ಪಿಸಿಆರ್ ಜಾರಿಗೆ ತೋರುತ್ತಿರುವ ಆತುರದಿಂದಾಗಿ ಅದರ ಹಿಂದಿರುವ ರಾಜಕೀಯ ದುರುದ್ದೇಶ ಈಗ ಸಾರ್ವಜನಿಕರಿಗೆ ಸ್ಪಷ್ಟವಾಗಿ ಅರ್ಥವಾಗಿದೆ ಎಂದರು.


ಕೇಂದ್ರಕ್ಕೆ ದೂರು ಸಲ್ಲಿಕೆ
ಈ ಗಂಭೀರ ವಿಷಯದ ಬಗ್ಗೆ ಈಗಾಗಲೇ ಕೇಂದ್ರ ಸಚಿವರು ಸ್ಪಷ್ಟನೆ ನೀಡಿದ್ದಾರೆ. ಅಷ್ಟೇ ಅಲ್ಲದೆ, ಸರ್ಕಾರದ ಈ ನಡೆಯ ವಿರುದ್ಧ ಚುನಾವಣಾ ಆಯೋಗಕ್ಕೂ ಅಧಿಕೃತವಾಗಿ ದೂರು ಸಲ್ಲಿಸಲಾಗಿದೆ ಎಂದು ಶಾಸಕ ಸುನಿಲ್‌ಕುಮಾರ್ ಹೇಳಿದರು.


ಅಸ್ತಿತ್ವಕ್ಕಾಗಿ ಆರ್.ಎಸ್.ಎಸ್!
ರಾಜ್ಯದಲ್ಲಿ ತಾವಿನ್ನೂ ಅಸ್ತಿತ್ವದಲ್ಲಿದ್ದೇವೆ ಎಂಬುದನ್ನು ಜನರಿಗೆ ನೆನಪಿಸಲು ಮತ್ತು ಸದಾ ಮಾಧ್ಯಮಗಳ ಸುದ್ದಿಯಲ್ಲಿ ಉಳಿಯಲು ಕಾಂಗ್ರೆಸ್ ನಾಯಕರು ಹಾಗೂ ಪಕ್ಷದ ರಾಜ್ಯಾಧ್ಯಕ್ಷರು ಪ್ರತಿದಿನ ಆರ್.ಎಸ್.ಎಸ್. ಹೆಸರನ್ನು ಜಪಿಸುತ್ತಿದ್ದಾರೆ. ಆರ್.ಎಸ್.ಎಸ್. ಹೆಸರು ಹೇಳದಿದ್ದರೆ ಅವರಿಗೆ ಜನರೆದುರು ಹೋಗಲು ವಿಷಯಗಳೇ ಇರುವುದಿಲ್ಲ ಎಂದು ಲೇವಡಿ ಮಾಡಿದರು.


ನಾವು ಯಾರೂ ದಿನವೂ ಬೆಳಿಗ್ಗೆ ಎದ್ದು ಆರ್.ಎಸ್.ಎಸ್. ಎಂದು ಹೇಳುವುದಿಲ್ಲ. ಆದರೆ, ಅವರೇ ಪ್ರತಿದಿನ ಆರ್.ಎಸ್.ಎಸ್. ಜಪ ಮಾಡುತ್ತಿದ್ದಾರೆ. ಆರ್.ಎಸ್.ಎಸ್. ಹೆಸರನ್ನು ತೆಗೆದುಕೊಳ್ಳುವುದರಿಂದಲೇ ತಮಗೆ ಒಳಿತಾಗುತ್ತದೆ ಎಂದು ಅವರು ಭಾವಿಸಿದ್ದರೆ ಹಾಗೆಯೇ ಪ್ರತಿದಿನ ಹೇಳಿಕೊಳ್ಳುತ್ತಿರಲಿ, ಅದಕ್ಕೆ ನಮ್ಮ ಅಭ್ಯಂತರವೇನೂ ಇಲ್ಲ ಎಂದು ವ್ಯಂಗ್ಯವಾಡಿದರು.


ಹೇಳಿಕೊಳ್ಳಲು ಸಾಧನೆಗಳೇ ಇಲ್ಲ!
ಕಾಂಗ್ರೆಸ್ ಸರ್ಕಾರದ ಯಾವುದೇ ಸಾಧನೆಗಳೂ ಪ್ರಚಾರಕ್ಕೆ ಬರುತ್ತಿಲ್ಲ. ಕಾರಣ, ಅವರ ಸರ್ಕಾರದಲ್ಲಿ ಹೇಳಿಕೊಳ್ಳುವಂಥ ಯಾವುದೇ ಸಾಧನೆಗಳೇ ಆಗಿಲ್ಲ. ತಮ್ಮ ಇಲಾಖೆಗಳಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ ಎಂಬುದು ಸ್ವತಃ ಕಾಂಗ್ರೆಸ್ ಸಚಿವರಿಗೇ ಮನವರಿಕೆಯಾಗಿದೆ ಎಂದರು.