ಲೋಕಬಂಧು ನ್ಯೂಸ್ | ಉಡುಪಿ, ಜು.10
ಮತದಾರರ ಪಟ್ಟಿಯಿಂದ ಹೆಸರು ತೆಗೆಯುವ ಅಧಿಕಾರ ಯಾವುದೇ ಅಧಿಕಾರಿಗೆ ಇಲ್ಲ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಸ್ಟಷ್ಟಪಡಿಸಿದರು.
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಉಡುಪಿ ಪತ್ರಿಕಾ ಭವನ ಸಮಿತಿ ಸಹಯೋಗದೊಂದಿಗೆ ಉಡುಪಿ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ `ತಿಂಗಳ ಅಂಗಳ' ಸಂವಾದ ಕಾರ್ಯಕ್ರಮದಲ್ಲಿ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್ಐಆರ್) ಕುರಿತು ಮಾತನಾಡಿದರು.
ಎಸ್ಐಆರ್'ಗೆ ಸಂಬಂಧಿಸಿ ಆಗಸ್ಟ್ 5ರಂದು ಕರಡು ಪಟ್ಟಿ ಪ್ರಕಟಿಸಲಾಗುವುದು. ಅದರಲ್ಲಿ ಹೆಸರು ಬಿಟ್ಟುಹೋಗಿದ್ದರೆ ಮಾತ್ರ ಸಂಬಂಧಪಟ್ಟ 11 ದಾಖಲೆಗಳಲ್ಲಿ ಒಂದನ್ನು ಸಲ್ಲಿಸಬೇಕೇ ಹೊರತು ಹೆಸರು ಇದ್ದವರು ಯಾವುದೇ ದಾಖಲೆ ಸಲ್ಲಿಸಬೇಕಾದ ಅಗತ್ಯ ಇಲ್ಲ ಎಂದರು.
ಮನೆ ಮನೆಗೆ ಭೇಟಿ ನೀಡಿ ಫಾರ್ಮ್ ನೀಡಲು ಮತ್ತು ಸಂಗ್ರಹಿಸುವಂತೆ ಬಿಎಲ್ಓಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ನಿಧಾನ ಗತಿಯಲ್ಲಿ ಕಾರ್ಯನಿರ್ವಹಿಸಿದ ಬಿಎಲ್ಓಗಳಿಗೆ ಈಗಾಗಲೇ ನೋಟಿಸ್ ಜಾರಿ ಮಾಡಲಾಗಿದೆ. ಸರಿಯಾಗಿ ಕರ್ತವ್ಯ ನಿರ್ವಹಿಸದ ಬಿಎಲ್ಓಗಳ ಬಗ್ಗೆ ಗಮನಕ್ಕೆ ತಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಫಾರ್ಮ್ ಸಲ್ಲಿಸಿಯೂ ಕರಡು ಪಟ್ಟಿಯಲ್ಲಿ ಹೆಸರು ಬಿಟ್ಟು ಹೋಗಿದ್ದರೆ ಅವರು ತಮ್ಮಲ್ಲಿರುವ ಇನ್ನೊಂದು ಪ್ರತಿಯೊಂದಿಗೆ ಅರ್ಜಿ ಸಲ್ಲಿಸಬಹುದು. ಹೆಸರಿನಲ್ಲಿ ವ್ಯಾತ್ಯಾಸ ಇದ್ದವರಿಗೆ ಜಿಲ್ಲಾಡಳಿತವೇ ನೋಟೀಸ್ ನೀಡಲಿದೆ. ಅವರು ತಮ್ಮ ಪ್ರಸ್ತುತ ಹೆಸರು ಬದಲಾಗಿರುವುದಕ್ಕೆ ಸಂಬಂಧಿಸಿ ದಾಖಲೆ ಸಲ್ಲಿಸಬೇಕು. ಕರಡು ಪಟ್ಟಿಯಲ್ಲಿ ಇದ್ದವರ ಹೆಸರು ಯಾವುದೇ ಕಾರಣಕ್ಕೂ ಅಂತಿಮ ಪಟ್ಟಿಯಲ್ಲಿ ಬಿಟ್ಟು ಹೋಗುವುದಿಲ್ಲ.
ಬಿಟ್ಟುಹೋಗಲು ಎರಡೇ ಕಾರಣ!
ಫಾರ್ಮ್ ಭರ್ತಿ ಮಾಡಿ ವಾಪಸ್ ನೀಡದವರು ಮತ್ತು ನೀಡಿದ ಫಾರ್ಮ್'ನ್ನು ಬಿಎಲ್ ಓಗಳು ಅಪ್‌ಲೋಡ್ ಮಾಡದಿರುವರ ಹೆಸರು ಮಾತ್ರ ಕರಡು ಪ್ರತಿಯಲ್ಲಿ ಬಿಟ್ಟುಹೋಗುತ್ತದೆ. ಈ ಎರಡು ಕಾರಣಗಳ ಹೊರತಾಗಿ ಬೇರೆ ಯಾವುದೇ ಕಾರಣಕ್ಕೂ ಹೆಸರು ಬಿಟ್ಟು ಹೋಗುವುದಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಮ್ಯಾಪಿಂಗ್ ಆಗಿಲ್ಲ ಎಂಬ ಕಾರಣಕ್ಕೆ ಕರಡು ಪ್ರತಿಯಲ್ಲಿ ಹೆಸರು ಬಿಟ್ಟು ಹೋಗುವುದಿಲ್ಲ. ಮ್ಯಾಪಿಂಗ್'ಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ. ಬಿಎಲ್‌ಓನಿಂದಾಗಿ ಕರಡುಪ್ರತಿಯಲ್ಲಿ ಹೆಸರು ಬಿಟ್ಟು ಹೋಗಿದ್ದರೆ ತಮ್ಮ ಕೈಯಲ್ಲಿರುವ ಇನ್ನೊಂದು ಪ್ರತಿಯನ್ನು ಸಲ್ಲಿಸಿ ದೂರು ನೀಡಬಹುದು ಎಂದವರು ಸ್ಪಷ್ಟಪಡಿಸಿದರು.
ಅ.7ರಂದು ಅಂತಿಮ ಪಟ್ಟಿ
ಅಕ್ಟೋಬರ್ 7ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು. ಅದುವರೆಗೆ 18 ವರ್ಷ ಪೂರೈಸಿದ ಹೊಸ ಮತದಾರರನ್ನು ಹೊರತುಪಡಿಸಿ ಇತರ ಯಾವುದೇ ಮತದಾರರನ್ನು ಸೇರಿಸುವಂತಿಲ್ಲ ಎಂದರು
ಫಾರ್ಮ್'ಗೆ ಸಂಬಂಧಿಸಿ ಗೊಂದಲ ನಿವಾರಿಸಲು ಹಾಗೂ ಸಹಾಯ ಮಾಡಲು ತಾಲೂಕು ಮಟ್ಟದಲ್ಲಿ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಬೂತ್'ನಲ್ಲಿಯೇ ಸ್ವಯಂ ಸೇವಕರನ್ನು ನೇಮಿಸಲಾಗಿದೆ. ಅವರು ಭಾನುವಾರ ಸಹಿತ ರಜಾ ದಿನಗಳಲ್ಲೂ ಕಾರ್ಯನಿರ್ವಹಿಸುತ್ತಾರೆ.
ಬಿಎಲ್ಓಗಳ ಬಗ್ಗೆ ದೂರುಗಳಿದ್ದರೆ ಸೆಕ್ಟರ್ ಅಧಿಕಾರಿಗಳು ಅಥವಾ ತಹಶೀಲ್ದಾರ್'ಗೆ ದೂರವಾಣಿ ಕರೆ ಮಾಡಿ ಕೂಡಾ ತಿಳಿಸಬಹುದು. ತೀವ್ರ ಅನಾರೋಗ್ಯ, ಅಪಘಾತ ಇತ್ಯಾದಿ ಸಂಭವಿಸಿದಲ್ಲಿ ಅಂಥ ಬಿಲ್ಓಗಳಿಗೆ ನೇಮಿಸಲಾದ ಸಹಾಯಕ ಬಿಎಲ್ಓಗಳು ಕಾರ್ಯನಿರ್ವಹಿಸುತ್ತಾರೆ ಎಂದರು.
ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಜಿ. ಕುರ್ಯ ಅಧ್ಯಕ್ಷತೆ ವಹಿಸಿದ್ದರು. ವಾರ್ತಾಧಿಕಾರಿ ಮಂಜುನಾಥ್, ಸಂಘದ ಜಿಲ್ಲಾ ಕೋಶಾಧಿಕಾರಿ ಹರೀಶ್ ಕುಂದರ್, ಪತ್ರಿಕಾ ಭವನ ಸಮಿತಿ ಸಹಸಂಚಾಲಕ ಗಣೇಶ್ ಕಲ್ಯಾಣಪುರ ಇದ್ದರು.
ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಸ್ವಾಗತಿಸಿ, ರಾಜ್ಯ ಸಮಿತಿ ಸದಸ್ಯ ಆಸ್ಟ್ರೋ ಮೋಹನ್ ವಂದಿಸಿದರು. ಸದಸ್ಯ ರಹೀಂ ಉಜಿರೆ ನಿರೂಪಿಸಿದರು.
ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರನ್ನು ಸಂಘದ ವತಿಯಿಂದ ಗೌರವಿಸಲಾಯಿತು.
.jpg)
.jpg)
.jpg)
.jpg)