ಲೋಕಬಂಧು ನ್ಯೂಸ್ | ಉಡುಪಿ, ಜು.11
ಉಡುಪಿ ಸಬ್ ರಿಜಿಸ್ಟ್ರಾರ್ ಕಚೇರಿಯ ಸರ್ವರ್ ಸಮಸ್ಯೆಯನ್ನು ಶೀಘ್ರ ಪರಿಹರಿಸುವಂತೆ ಶಾಸಕ ಯಶಪಾಲ್ ಸುವರ್ಣ ಮುದ್ರಾಂಕ ಮತ್ತು ನೋಂದಣಿ ಇಲಾಖೆ ಕಮಿಷನರ್ ಮುಲ್ಲೈ ಮುಗಿಲನ್ ಅವರನ್ನು ಒತ್ತಾಯಿಸಿದರು.
ನಗರದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ಕಾರ್ಯಗಳು ನಡೆಯದೇ ನೂರಾರು ಮಂದಿ ಬೆಳಿಗ್ಗೆಯಿಂದ ಕಾಯುವ ಸನ್ನಿವೇಶ ನಿರ್ಮಾಣವಾಗಿದೆ ಎಂಬ ಬಗ್ಗೆ ಸಾರ್ವಜನಿಕರ ಮಾಹಿತಿ ಮೇರೆಗೆ ಶುಕ್ರವಾರ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಕಳೆದ 3 ದಿನಗಳಿಂದ ಸರ್ವರ್ ಸಮಸ್ಯೆ ತಲೆದೋರಿದೆ. ನೂರಾರು ಮಂದಿ ನೋಂದಣಿಗಾಗಿ ಕಚೇರಿಗೆ ಆಗಮಿಸಿದ್ದು ಸಂಜೆಯ ವರೆಗೂ ಒಂದೇ ಒಂದು ಕಡತವೂ ಸರ್ವರ್ ವ್ಯತ್ಯಯದಿಂದಾಗಿ ನೋಂದಣಿಯಾಗಿಲ್ಲ.
ಹಲವಾರು ಮಂದಿ ವಯೋವೃದ್ಧರು, ಪರವೂರಿನಿಂದ ಬಂದ ಸಾರ್ವಜನಿಕರು, ಮಹಿಳೆಯರು ಸಮಸ್ಯೆ ಎದುರಿಸುವಂತಾಗಿದೆ.
ಸಮಸ್ಯೆಯ ಗಂಭೀರತೆ ಹಿನ್ನೆಲೆಯಲ್ಲಿ ಶಾಸಕ ಯಶಪಾಲ್ ಸುವರ್ಣ ಅವರಿಗೆ ದೂರವಾಣಿ ಕರೆ ಮಾಡಿ ಸರ್ವರ್ ಸಮಸ್ಯೆಯನ್ನು ತಕ್ಷಣ ಪರಿಹರಿಸುವಂತೆ ಮನವಿ ಮಾಡಿ, ಇಂದು ನಿಗದಿಯಾದ ಕಡತಗಳ ನೋಂದಣಿಯನ್ನು ರಾತ್ರಿಯೊಳಗೆ ನಡೆಸಲು ಅವಕಾಶ ನೀಡುವಂತೆ ಹಾಗೂ ಬಾಕಿ ಉಳಿದ ಕಡತಗಳನ್ನು ಆದಿತ್ಯವಾರ ನಡೆಸಲು ಅವಕಾಶ ನೀಡುವಂತೆ ತಿಳಿಸಿದರು.
ಈ ಬಗ್ಗೆ ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದ ಶಾಸಕ ಯಶಪಾಲ್, ರಾಜ್ಯ ಸರ್ಕಾರಕ್ಕೆ ಕೋಟ್ಯಂತರ ರೂ. ಆದಾಯ ತರುವ ನೋಂದಣಿ ಕಚೇರಿಯಲ್ಲಿ ಪ್ರತಿನಿತ್ಯ ಸರ್ವರ್ ಸಮಸ್ಯೆಯಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದ್ದು, ಈ ಬಗ್ಗೆ ವಿಶೇಷ ಮುತುವರ್ಜಿ ವಹಿಸಿ ಸಮಸ್ಯೆಗೆ ಪರಿಹಾರ ಒದಗಿಸಲು ಕ್ರಮ ವಹಿಸುವಂತೆ ತಿಳಿಸಿದರು.
ಅಧಿವೇಶನದಲ್ಲಿ ಪ್ರಸ್ತಾಪ
ರಾಜ್ಯ ಸರ್ಕಾರ ಉನ್ನತ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಬೇಕು. ಮುಂದಿನ ಅಧಿವೇಶನದಲ್ಲಿ ರಾಜ್ಯಾದ್ಯಂತ ಸರ್ವರ್ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿ ಸಮಸ್ಯೆಗೆ ಪರಿಹಾರ ಒದಗಿಸಲು ರಾಜ್ಯ ಸರಕಾರವನ್ನು ಒತ್ತಾಯಿಸುವುದಾಗಿ ಶಾಸಕ ಯಶಪಾಲ್ ಸುವರ್ಣ ತಿಳಿಸಿದರು.
ಜು.12ರಂದು ಕಾರ್ಯನಿರ್ವಹಣೆ
ಜು.12ರಂದು ಭಾನುವಾರ ರಾಜ್ಯದ ಎಲ್ಲಾ ಉಪನೋಂದಣಿ ಕಚೇರಿಗಳು ಎಂದಿನಂತೆ ಕರ್ತವ್ಯ ನಿರ್ವಹಿಸಲಿವೆ. ಸಾರ್ವಜನಿಕರ ಅನುಕೂಲಕ್ಕಾಗಿ ಮತ್ತು ಇಲಾಖೆಯ ಕಾರ್ಯದೊತ್ತಡ ನಿವಾರಣೆಗಾಗಿ ಎಂದಿನಂತೆ ತೆರೆದಿದ್ದು, ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲಿದೆ. ಅಂದು ಎಂದಿನಂತೆ ಆಸ್ತಿ ನೋಂದಣಿ, ಮುದ್ರಾಂಕ ಖರೀದಿ ಹಾಗೂ ಇಲಾಖೆಗೆ ಸಂಬಂಧಿಸಿದ ಇತರ ಸೇವೆಗಳನ್ನು ಪಡೆದುಕೊಳ್ಳಬಹುದು ಎಂದು ನೋಂದಣಿ ಮತ್ತು ಮುದ್ರಾಂಕಗಳ ಇಲಾಖೆ ಪ್ರಕಟಣೆ ತಿಳಿಸಿದೆ.
