ಮಳೆಗಾಲದ ತುರ್ತು ಕೆಲಸಗಳಿಗೆ ಸಮನ್ವಯದಿಂದ ಸ್ಪಂದಿಸಿ

ಲೋಕಬಂಧು ನ್ಯೂಸ್ | ಉಡುಪಿ, ಜು.10
ಮಳೆಗಾಲದ  ಅವಘಡಗಳನ್ನು ತುರ್ತಾಗಿ ನಿಭಾಯಿಸಲು ನಗರಸಭೆ, ಮೆಸ್ಕಾಂ, ಅಗ್ನಿಶಾಮಕ ಹಾಗೂ ಅರಣ್ಯ ಇಲಾಖೆಗಳನ್ನು ಒಳಗೊಂಡ ಸದೃಢ ಕಾರ್ಯಪಡೆ ಸಮನ್ವಯತೆಯಿಂದ ತಕ್ಷಣ ಕಾರ್ಯಪ್ರವೃತ್ತರಾಗಿ ಸ್ಪಂದಿಸುವಂತೆ ಶಾಸಕ ಯಶಪಾಲ್ ಸುವರ್ಣ ಅಧಿಕಾರಿಗಳಿಗೆ ಸೂಚಿಸಿದರು.
ಶುಕ್ರವಾರ ಉಡುಪಿ ನಗರಸಭೆಯಲ್ಲಿ ನಡೆದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.


ಸಾರ್ವಜನಿಕರು ತುರ್ತು ಸಂದರ್ಭದಲ್ಲಿ  ಸಂಪರ್ಕಿಸಲು 24/7 ನಗರಸಭೆಯಲ್ಲಿ ಕಂಟ್ರೋಲ್ ರೂಮ್ ಸ್ಥಾಪಿಸಿ, ಸಂಪರ್ಕ ಸಂಖ್ಯೆಯನ್ನು ಮಾಧ್ಯಮಗಳಲ್ಲಿ ಪ್ರಕಟಿಸುವಂತೆ ಸೂಚಿಸಿದರು.


ನೀರು, ಗ್ಯಾಸ್ ಪೈಪ್ ಲೈನ್ ಹಾಗೂ ಕೇಬಲ್ ಅಳವಡಿಕೆಗಾಗಿ ರಸ್ತೆ ಬದಿ ಅಗೆತ ಮಾಡಿ ಹಾಗೇ ಬಿಟ್ಟಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಹಲವು ಬಾರಿ ತಿಳಿಸಿದರೂ ಕ್ರಮ ಕೈಗೊಳ್ಳದೇ ಇರುವುದರಿಂದ ಕೂಡಲೇ ಸಂಬಂಧಪಟ್ಟವರ ಮೇಲೆ ನಗರಸಭೆ ವತಿಯಿಂದ ಕ್ರಮ ಕೈಗೊಳ್ಳಲು ಸೂಚಿಸಿದರು.


ಮಳೆಗಾಲದಲ್ಲಿ ಪ್ರಾಕೃತಿಕ ವಿಕೋಪ, ವಿದ್ಯುತ್ ವ್ಯತ್ಯಯಗಳನ್ನು ಗಮದಲ್ಲಿರಿಸಿ, ನಿರಂತರ ಕುಡಿಯುವ ನೀರು ಪೂರೈಕೆಗೆ ತಯಾರಿ ನಡೆಸಲು ಕುಡಿಯುವ ನೀರು ವಿಭಾಗದ ಅಧಿಕಾರಿಗಳಿಗೆ ಸೂಚಿಸಿದರು.


ಮಣಿಪಾಲ-ಪೆರಂಪಳ್ಳಿ-ಅಂಬಾಗಿಲು ರಸ್ತೆಯಲ್ಲಿ, ರಸ್ತೆ ಅಗಲಗೊಳಿಸಲು ಭೂಮಿ ಬಿಟ್ಟುಕೊಟ್ಟವರಿಗೆ ಟಿ.ಡಿ.ಆರ್. ಮಾದರಿಯಲ್ಲಿ ಸವಲತ್ತು ನೀಡುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿ, ನಗರಸಭೆ ವತಿಯಿಂದ ಈವರೆಗೆ ಟಿ.ಡಿ.ಆರ್. ಕುರಿತು ಪ್ರಸ್ತಾವನೆ ಸಲ್ಲಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದರು. ಆ ಬಗ್ಗೆ  ರಸ್ತೆ ಅಗಲಗೊಳಿಸಲು ಜಮೀನು ನೀಡಿದ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಎಂದರು.


ಸರಳಬೆಟ್ಟು ಬಬ್ಬುಸ್ವಾಮಿ ಲೇಔಟ್'ನಲ್ಲಿ ಸರಕಾರಿ ವಸತಿ ಸಮುಚ್ಛಯ ನಿರ್ಮಾಣ ಸಂದರ್ಭದಲ್ಲಿ ನಿಯಮಾವಳಿಗಳನ್ನು ಮೀರಿ ಮೂಲಭೂತ ಸೌಲಭ್ಯಗಳಾದ ರಸ್ತೆ ಈ.ಟಿ.ಪಿ., ಚರಂಡಿ, ದಾರಿದೀಪ ಹಾಗೂ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ನಿವಾಸಿಗಳು ಸಮಸ್ಯೆ ಎದುರಿಸುವಂತಾಗಿದೆ. ಈಗಾಗಲೇ ಆ ಬಗ್ಗೆ ಕೊಳಗೇರಿ ಅಭಿವೃದ್ಧಿ ಮಂಡಳಿ ಮೂಲಕ 7 ಕೋಟಿ ರೂ. ವೆಚ್ಚದಲ್ಲಿ ಅಗತ್ಯ ಕಾಮಗಾರಿಗಳಿಗೆ ಅನುದಾನ ಮಂಜೂರು ಮಾಡಲಾಗಿದ್ದು, ಜನಸಾಮಾನ್ಯರು ಮನೆ ನಿರ್ಮಾಣಕ್ಕೆ ಹಲವಾರು ಷರತ್ತುಗಳನ್ನು ಹಾಕುವ ನಗರಸಭೆ, ಸರ್ಕಾರಿ ವಸತಿ ಸಮುಚ್ಛಯ ನಿರ್ಮಾಣ ಸಂದರ್ಭದಲ್ಲಿ  ನಿಯಮ ಮೀರಿದ ಪರಿಣಾಮ ಇಂದು ಜನರು ನಗರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಸನ್ನಿವೇಶ ನಿರ್ಮಾಣವಾಗಿದೆ ಎಂದರು.


ಸಭೆಯಲ್ಲಿ ನಗರಸಭೆ ಪೌರಾಯುಕ್ತ ಮಹಾಂತೇಶ ಹಂಗರಗಿ, ನಗರಸಭೆ ಮಾಜಿ ಅಧ್ಯಕ್ಷರಾದ ಪ್ರಭಾಕರ ಪೂಜಾರಿ, ಕಿರಣ್ ಕುಮಾರ್ ಬೈಲೂರು ಮತ್ತು ಸುಮಿತ್ರಾ ನಾಯಕ್, ಮಾಜಿ ನಗರಸಭಾ ಸದಸ್ಯರಾದ ಗಿರಿಧರ ಆಚಾರ್ಯ, ಬಾಲಕೃಷ್ಣ ಶೆಟ್ಟಿ, ಹರೀಶ್ ಶೆಟ್ಟಿ, ಗಿರೀಶ್ ಅಂಚನ್, ವಿಜಯ ಕೊಡವೂರು, ಕಲ್ಪನಾ ಸುದಾಮ, ಅನಿಟ ಡಿ'ಸೋಜ ಮತ್ತು ಭಾರತಿ ಪ್ರಶಾಂತ್, ಅರಣ್ಯ, ಅಗ್ನಿಶಾಮಕ, ಮೆಸ್ಕಾಂ ಇಲಾಖೆ ಅಧಿಕಾರಿಗಳು ಹಾಗೂ ಉಡುಪಿ ನಗರಸಭೆಯ ವಿವಿಧ ವಿಭಾಗದ ಅಧಿಕಾರಿಗಳು ಇದ್ದರು.