ಲೋಕಬಂಧು ನ್ಯೂಸ್ ಮೈಸೂರು, ಜು.12
ಭಾರತೀಯ ಚಿತ್ರರಂಗದ ಖ್ಯಾತ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅವರ ಇಚ್ಛೆಯಂತೆ ಮೈಸೂರಿನ ಕಣಿಯನಹುಂಡಿಯಲ್ಲಿ ಭಾನುವಾರ ಸಂಜೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು.ತೆಲುಗು ಬ್ರಾಹಣ ವಿಧಿ-ವಿಧಾನಗಳ ಮೂಲಕ ಜಾನಕಿ ಅವರ ಅಂತ್ಯಕ್ರಿಯೆ ನೆರವೇರಿತು. ಜಾನಕಿಯವರ ಪುತ್ರ ಕೆಲವು ವರ್ಷಗಳ ಹಿಂದೆಯೇ ನಿಧನರಾಗಿದ್ದ ಹಿನ್ನೆಲೆಯಲ್ಲಿ ಮೊಮ್ಮಗಳು ಅಪ್ಸರಾ ಅಂತ್ಯಸಂಸ್ಕಾರದ ವಿಧಿ-ವಿಧಾನಗಳನ್ನು ನೆರವೇರಿಸಿದರು.
ಎಚ್‌ಡಿ ಕೋಟೆ ತಾಲೂಕಿನ ಕಣಿಯನಹುಂಡಿ ಗ್ರಾಮದಲ್ಲಿರುವ ನವೀನ್ ಫಾರಂ ಹೌಸ್‌ನಲ್ಲಿ ಹಿಂದೂ ಧರ್ಮ ಮತ್ತು ಸಂಪ್ರದಾಯದಂತೆ ತೆಲುಗು ಬ್ರಾಹಣ ಪದ್ಧತಿಯಂತೆ ಪಾರ್ಥಿವ ಶರೀರಕ್ಕೆ ಅಗ್ನಿ ಸ್ಪರ್ಶ ನೆರವೇರಿಸಲಾಯಿತು.
ಅಂತಿಮ ದರ್ಶನಕ್ಕಾಗಿ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಅಭಿಮಾನಿಗಳು, ಸಂಗೀತಾಸಕ್ತರು ಹಾಗೂ ಚಿತ್ರರಂಗದ ಗಣ್ಯರು ಆಗಮಿಸಿ ಜಾನಕಿಯಮ್ಮ ಅವರಿಗೆ ಅಂತಿಮ ನಮನ ಸಲ್ಲಿಸಿದರು. ಕುಟುಂಬದ ಸದಸ್ಯರು, ಆಪ್ತರು ಮತ್ತು ಬಂಧುಗಳ ಸಮ್ಮುಖದಲ್ಲಿ ಅಂತಿಮ ವಿಧಿ-ವಿಧಾನಗಳು ನಡೆದವು.
ಬದುಕಿದ್ದಾಗಲೇ ತಮ್ಮ ನಿಧನದ ಬಳಿಕ ತಮ್ಮ ನೆಚ್ಚಿನ ತೋಟದಲ್ಲೇ ಅಂತ್ಯಸಂಸ್ಕಾರ ನಡೆಸುವಂತೆ ಎಸ್. ಜಾನಕಿ ಇಚ್ಛೆ ವ್ಯಕ್ತಪಡಿಸಿದ್ದರು. ಅದರಂತೆ ಕುಟುಂಬದವರು ಅವರ ಆಸೆಯನ್ನು ಗೌರವಿಸಿ ಅಂತ್ಯಸಂಸ್ಕಾರ ನೆರವೇರಿಸಿದರು.
ಸುಮಾರು ಆರು ದಶಕಗಳ ಸಂಗೀತ ಪಯಣದಲ್ಲಿ ಸಾವಿರಾರು ಹಾಡುಗಳಿಗೆ ಕಂಠದಾನ ಮಾಡಿದ್ದ ಜಾನಕಿ ಅವರು ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳಂ, ಹಿಂದಿ ಹಾಗೂ ಹಲವು ಭಾರತೀಯ ಭಾಷೆಗಳಲ್ಲಿ ತಮ್ಮ ಸುಮಧುರ ಗಾಯನದ ಮೂಲಕ ಕೋಟ್ಯಂತರ ಅಭಿಮಾನಿಗಳ ಮನ ಗೆದ್ದಿದ್ದರು. ಅವರ ನಿಧನದಿಂದ ಭಾರತೀಯ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟ ಉಂಟಾಗಿದೆ.