ಎಸ್ಐಆರ್: 7,40,582 ಗಣತಿ ನಮೂನೆ ವಿತರಣೆ

ಲೋಕಬಂಧು ನ್ಯೂಸ್ | ಉಡುಪಿ, ಜು.9
ಭಾರತೀಯ ಚುನಾವಣಾ ಆಯೋಗದ ನಿರ್ದೇಶನದಂತೆ ಉಡುಪಿ ಜಿಲ್ಲೆಯಲ್ಲಿ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಕಾರ್ಯಕ್ರಮ ಪ್ರಗತಿಯಲ್ಲಿದ್ದು, ಈ ಪ್ರಕ್ರಿಯೆಯ ಅಂಗವಾಗಿ ಮತಗಟ್ಟೆ ಮಟ್ಟದ ಅಧಿಕಾರಿ (ಬಿಎಲ್ಒ)ಗಳು ಮನೆ ಮನೆಗೆ ಭೇಟಿ ನೀಡಿ, ಎನ್ಯುಮರೇಷನ್ ಫಾರ್ಮ್'ಗಳನ್ನು ವಿತರಿಸುತ್ತಿದ್ದಾರೆ ಮತ್ತು ಸಂಗ್ರಹಿಸುತ್ತಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 10,63,876 ಎನ್ಯುಮರೇಷನ್ ಫಾರ್ಮ್'ಗಳನ್ನು ಮುದ್ರಿಸಲಾಗಿದ್ದು, ಈವರೆಗೆ ಬೈಂದೂರು ವಿಧಾನಸಭೆ ಕ್ಷೇತ್ರದಲ್ಲಿ 1,81,451 ಮತದಾರರಿಗೆ, ಕುಂದಾಪುರ ವಿಧಾನಸಭೆ ಕ್ಷೇತ್ರದಲ್ಲಿ 1,59,874 ಮತದಾರರಿಗೆ, ಉಡುಪಿ ವಿಧಾನಸಭೆ ಕ್ಷೇತ್ರದಲ್ಲಿ 1,31,693 ಮತದಾರರಿಗೆ, ಕಾಪು ವಿಧಾನಸಭೆ ಕ್ಷೇತ್ರದಲ್ಲಿ 1,28,356 ಮತದಾರರಿಗೆ ಹಾಗೂ ಕಾರ್ಕಳ ವಿಧಾನಸಭೆ ಕ್ಷೇತ್ರದಲ್ಲಿ 1,39,208 ಮತದಾರರಿಗೆ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 7,40,582 ಮತದಾರರಿಗೆ ಎನ್ಯುಮರೇಷನ್ ಫಾರ್ಮ್ ವಿತರಿಸಲಾಗಿದೆ.


ಜಿಲ್ಲೆಯಲ್ಲಿ 39,469 ಗಣತಿ ನಮೂನೆಗಳನ್ನು ಡಿಜಿಟಲೀಕರಣಗೊಳಿಸಲಾಗಿದ್ದು, 282 ಮತದಾರರು ಮೃತಪಟ್ಟಿರುವುದು ಮನೆ ಭೇಟಿ ವೇಳೆ ಕಂಡುಬಂದಿದೆ. 154 ಮತದಾರರು ಖಾಯಂ ಆಗಿ ಬೇರೆ ಕಡೆಗೆ ವರ್ಗಾವಣೆಗೊಂಡಿದ್ದು, 45 ಮತದಾರರು ತಮ್ಮ ದಾಖಲಾತಿ ಮಾಡಿದ್ದಾರೆ.


ಸಾರ್ವಜನಿಕರು ಆನ್‌ಲೈನ್ ಮೂಲಕವೂ ತಮ್ಮ ವಿವರಗಳನ್ನು ಭರ್ತಿ ಮಾಡಬಹುದು ಅಥವಾ ನವೀಕರಿಸಿಕೊಳ್ಳಬಹುದಾಗಿದ್ದು, ಅರ್ಹ ಮತದಾರರು ವೋಟರ್ ಸರ್ವಿ ಪೋರ್ಟಲ್ (ವಿ.ಎಸ್.ಪಿ) ಅಥವಾ ವೋಟರ್ ಹೆಲ್ಪ್ ಲೈನ್ ಆ್ಯಪ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ.  ತಿಳಿಸಿದ್ದಾರೆ.