ಆ.12ರಿಂದ ಪುತ್ತಿಗೆ ಶ್ರೀ ಚಾತುರ್ಮಾಸ್ಯ

ಲೋಕಬಂಧು ನ್ಯೂಸ್  ಉಡುಪಿ, ಆ.10
`ಯತಿಕುಲ ಚಕ್ರವರ್ತಿ' ಬಿರುದಾಂಕಿತ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಆಗಸ್ಟ್ 12ರಿಂದ ಸೆಪ್ಟೆಂಬರ್ 26ರ ವರೆಗೆ ತಮ್ಮ 53ನೇ ಚಾತುರ್ಮಾಸ್ಯ ವ್ರತವನ್ನು ನವಿ ಮುಂಬಯಿಯ ವಾಶಿಯಲ್ಲಿರುವ ಪುತ್ತಿಗೆ ಶಾಖಾಮಠದಲ್ಲಿ ವ್ಯಾಸಪೂಜೆಯೊಂದಿಗೆ ಕೈಗೊಳ್ಳಲಿದ್ದಾರೆ.
ಆ.11ರಂದು ಮುಂಬಯಿಯಲ್ಲಿರುವ ಪುತ್ತಿಗೆ ಮಠದ ಭಕ್ತರು ಹಾಗೂ ಶಿಷ್ಯರು ವೈಭವದಿಂದ ಶ್ರೀಗಳ ಪುರಪ್ರವೇಶ ಮೆರವಣಿಗೆ ನಡೆಸಲಿದ್ದಾರೆ. ಆ.12ರಿಂದ ವಿವಿಧ ಧಾರ್ಮಿಕ ಅನುಷ್ಠಾನ, ಭಜನೆ, ಪ್ರವಚನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಮಠದ ದಿವಾನ ನಾಗರಾಜ ಆಚಾರ್ಯ ತಿಳಿಸಿದ್ದಾರೆ.


ಈ ಹಿಂದೆ ಶ್ರೀಗಳು ಮುಂಬಯಿಯಲ್ಲಿ 7 ಚಾತುರ್ಮಾಸ್ಯ ಪೂರೈಸಿದ್ದು, ಇದು 8ನೆಯದಾಗಿದೆ.


ಉಡುಪಿ ಹಿರಿಯಡಕ ಸಮೀಪದ ಪುತ್ತಿಗೆಯಲ್ಲಿರುವ ಮೂಲಮಠದಲ್ಲಿ ಸುಗುಣೇಂದ್ರತೀರ್ಥ ಶ್ರೀಪಾದರು ಆ.10ರಂದು ಬೆಳಿಗ್ಗೆ ತಮ್ಮ ಗುರುಗಳಿಗೆ ಪೂಜೆ ನೆರವೇರಿಸಿ, ಮುಂಬಯಿಗೆ ಪಯಣ ಬೆಳೆಸಿದ್ದಾರೆ. ವ್ರತ ಸಾಂಗವಾಗಿ ನೆರವೇರಲು ಚಾತುರ್ಮಾಸ್ಯ ಸಮಿತಿ ರಚಿಸಲಾಗಿದೆ.


ಆ.15ರಂದು ನವಿ ಮುಂಬಯಿಯಲ್ಲಿರುವ ಪುತ್ತಿಗೆ ಶಾಖಾ ಮಠದ ಉದ್ಘಾಟನೆ ನೆರವೇರಲಿದೆ ಎಂದು ಮಠದ ಅಂತರರಾಷ್ಟ್ರೀಯ ಕಾರ್ಯದರ್ಶಿ ವಿದ್ವಾನ್ ಪ್ರಸನ್ನ ಆಚಾರ್ಯ ತಿಳಿಸಿದ್ದಾರೆ.