ರೆಂಜಾಳದಲ್ಲಿ ಗುಡ್ಡೆ ಜರಿತ: 2ಕುಟುಂಬ ಸ್ಥಳಾಂತರ

ಲೋಕಬಂಧು ನ್ಯೂಸ್ | ಕಾರ್ಕಳ, ಆ.5
ಕಾರ್ಕಳ ತಾಲೂಕಿನ ರೆಂಜಾಳ ಗ್ರಾಮದ ಹೇಡ್ಮೆ ಪ್ರದೇಶದಲ್ಲಿ ಗುಡ್ಡೆ ಜರಿತ ಉಂಟಾಗಿದ್ದು, ಭೂಕುಸಿತ ಸಂಭವಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ 2 ಕುಟುಂಬದ 8 ಮಂದಿಯನ್ನು ಸ್ಥಳಾಂತರಿಸಲಾಗಿದೆ.
ಪ್ರಸ್ತುತ ಒಂದು ಕುಟುಂಬದ 3 ಮಂದಿ ರೆಂಜಾಳ ಸರಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ತೆರೆಯಲಾಗಿರುವ ಕಾಳಜಿ ಕೇಂದ್ರದಲ್ಲಿದ್ದರೆ, ಮತ್ತೊಂದು ಕುಟುಂಬದ 5 ಮಂದಿ ಅವರ ಸಂಬಂಧಿಕರ ಮನೆಗೆ ತೆರಳಿದ್ದಾರೆ.


ಕಾರ್ಕಳ ತಾಲೂಕಿನಾದ್ಯಂತ ಕಳೆದ ಎರಡು ವಾರಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದ ಕೆಲವು ಪ್ರದೇಶಗಳಲ್ಲಿ ಭೂಕುಸಿತ ಉಂಟಾಗಿದೆ.


ಜಿಲ್ಲಾಧಿಕಾರಿ ಭೇಟಿ
ರೆಂಜಾಳ ಗ್ರಾಮದ ಹೆಡ್ಮೆ ಹರಿಪ್ರಸಾದ್ ಎಂಬವರ ಮನೆಯ ಸಮೀಪ ಭೂಕುಸಿತ ಸಂಭವಿಸಿದ್ದು, ಆ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ತಹಶೀಲ್ದಾರ್ ಪ್ರದೀಪ್ ಆರ್. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.


ಪರಿಸ್ಥಿತಿ ಅವಲೋಕಿಸಿದ  ಜಿಲ್ಲಾಧಿಕಾರಿ ಸ್ಥಳೀಯರೊಂದಿಗೆ ಚರ್ಚೆ ನಡೆಸಿ ಅಗತ್ಯವಿರುವ ಎಲ್ಲ ವ್ಯವಸ್ಥೆಗಳನ್ನು ಕಲ್ಪಿಸಲು ಅಧಿಕಾರಿಗಳಿಗೆ ಸೂಚಿಸಿದರು.


ಗುರುವಾರ ಸ್ಥಳಕ್ಕೆ ಭೂ ವಿಜ್ಞಾನಿಗಳು ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ