ಲೋಕಬಂಧು ನ್ಯೂಸ್ ಕುಂದಾಪುರ, ಜು.31
ಉದ್ಯಮಿ ಐವನ್ ರಿಚರ್ಡ್ ಮಸ್ಕರೇನಸ್ ಕೊಲೆಗೆ ಹಣಕಾಸು ವ್ಯವಹಾರ ಕಾರಣ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದ್ದು, ಕೃತ್ಯ ನಡೆಸಿ ಪರಾರಿಯಾದ ಡೆರಿಕ್ ಕ್ರಾಸ್ತಾ ಪತ್ತೆಗೆ ಮೂರು ವಿಶೇಷ ತಂಡ ರಚಿಸಲಾಗಿದೆ ಎಂದು ಎಸ್.ಪಿ. ಹರಿರಾಮ್ ಶಂಕರ್ ತಿಳಿಸಿದ್ದಾರೆ.
ಸಿಗಡಿ ವ್ಯಾಪಾರ ಮಾಡುತ್ತಿರುವ ಐವನ್ ರಿಚರ್ಡ್ ಮಸ್ಕರೇನಸ್'ಗೆ ಗುರುವಾರ ರಾತ್ರಿ 11.45ರ ಸುಮಾರಿಗೆ ಡೆರಿಕ್ ದೂರವಾಣಿ ಕರೆ ಮಾಡಿ ಚಟ್ಲಿ (ಸಿಗಡಿ ಮೀನು ಕೃಷಿ) ಕೊಡುವ ವಿಚಾರದಲ್ಲಿ ಬಾಕಿ ಹಣ ಬಗ್ಗೆ ಡೆರಿಕ್ ಮತ್ತು ಐವನ್ ನಡುವೆ ಮಾತಿಗೆ ಮಾತು ಬೆಳೆದು, ಧಮ್ ಇದ್ದರೆ ಕುಂದಾಪುರಕ್ಕೆ ಒಬ್ಬನೇ ಬರುವಂತೆ ಡೆರಿಕ್, ಐವನ್'ಗೆ ಸವಾಲೆಸೆದು, ರಾತ್ರಿ 1.30 ಗಂಟೆಗೆ ಲೊಕೇಶನ್ ಕಳುಹಿಸಿದ್ದ.
ಅದರಂತೆ ಐವನ್ ಶುಕ್ರವಾರ ಬೆಳಗ್ಗಿನ ಜಾವ 3.15ರ ಸಮಯ ಹೋಲಿ ರೋಸಾರಿಯೊ ಚರ್ಚ್ ಎದುರಿನ ರಸ್ತೆಯಲ್ಲಿ ಕಾರು ನಿಲ್ಲಿಸಿ, ಡೆರಿಕ್ ಬರುವಿಕೆಗಾಗಿ ನಿರೀಕ್ಷೆಯಲ್ಲಿದ್ದ. ಕಪ್ಪು ಕೆಂಪು ಬಣ್ಣದ ಥಾರ್ ಕಾರಿನಲ್ಲಿ ಬಂದ ಡೆರಿಕ್, ಐವನ್'ನ ಕಾರಿನ ಎದುರು ನಿಲ್ಲಿಸಿದಾಗ ಐವನ್ ಕಾರಿನಿಂದ ಇಳಿಯುತ್ತಲೇ ಪಿಸ್ತೂಲ್'ನಿಂದ ಐವನ್ ಸೊಂಟದ ಕೆಳಭಾಗಕ್ಕೆ ಶೂಟ್ ಮಾಡಿ ಪರಾರಿಯಾದ.
ಸೊಂಟ ಹಾಗೂ ಕಾಲಿನ ಭಾಗಕ್ಕೆ ಗಾಯಗೊಂಡು ರಸ್ತೆಯಲ್ಲೇ ಕುಸಿದುಬಿದ್ದ ಐವನ್ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ರೌಡಿ ಶೀಟರ್
ಐವನ್ ಯಾನೆ ಮುನ್ನಾ ಈ ಹಿಂದೆ ರೌಡಿಶೀಟರ್ ಆಗಿದ್ದು ಕುಕ್ಕಿಕಟ್ಟೆ ಪಿಟ್ಟಿ ನಾಗೇಶ ಕೊಲೆ ಪ್ರಕರಣದ ಆರೋಪಿಯಾಗಿದ್ದ. ಆತನ ವಿರುದ್ಧ ಉಡುಪಿ ನಗರ ಠಾಣೆಯಲ್ಲಿ ರೌಡಿ ಶೀಟ್ ಇತ್ತು. ಪಿಟ್ಟಿ ನಾಗೇಶನ ತಂಡ ಆತನ ಕೊಲೆಗೆ ಹಲವು ಬಾರಿ ಸಂಚು ರೂಪಿಸಿತ್ತು. ಇದೀಗ ಆತನೇ ಕೊಲೆಯಾಗಿದ್ದಾನೆ.
