ಲೋಕಬಂಧು ನ್ಯೂಸ್ ಮೂಡುಬಿದಿರೆ, ಆ.6
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ವತಿಯಿಂದ ಆಯೋಜಿಸಲಾಗುತ್ತಿರುವ ದೇಶದ ಅತಿದೊಡ್ಡ ಉಚಿತ ಉದ್ಯೋಗ ಮೇಳ 'ಆಳ್ವಾಸ್ ಪ್ರಗತಿ–2026ರ 26ನೇ ಆವೃತ್ತಿ ಆಗಸ್ಟ್ 7ರಂದು ಬೆಳಿಗ್ಗೆ 9.30 ಗಂಟೆಗೆ ವಿದ್ಯಾಗಿರಿಯ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ನಡೆಯಲಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ.ಮೋಹನ ಆಳ್ವ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಂಸದ ಕ್ಯಾ.ಬೃಜೇಶ್ ಚೌಟ ಮುಖ್ಯ ಅತಿಥಿಯಾಗಿ ಆಗಮಿಸುವರು.
ಮೂಲ್ಕಿ–ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆ ವಹಿಸಲಿದ್ದು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಉಪಸ್ಥಿತರಿರುವರು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಎ.ಕೆ. ಮಹೇಶ್ ಶೇಖಗೆ ಗೌರವ ಸಮರ್ಪಣೆ
ಆಳ್ವಾಸ್ ಉದ್ಯೋಗ ಮೇಳದ ಆರಂಭಿಕ ಹಂತದಲ್ಲಿ ಯೋಜನೆ, ಸಂಘಟನೆ ಹಾಗೂ ಯಶಸ್ವಿ ಅನುಷ್ಠಾನಕ್ಕೆ ಸಂಪೂರ್ಣ ಸಹಕಾರ ನೀಡಿ ಮಹತ್ವದ ಕೊಡುಗೆ ನೀಡಿದ್ದ, ಇತ್ತೀಚೆಗೆ ನಿಧನರಾದ ಎ.ಕೆ.ಮಹೇಶ್ ಶೇಖ ಸ್ಮರಣಾರ್ಥ ಈ ವರ್ಷದ ಆಳ್ವಾಸ್ ಪ್ರಗತಿಯ ಉದ್ಘಾಟನಾ ವೇದಿಕೆಯನ್ನು ಅವರಿಗೆ ಗೌರವಪೂರ್ವಕವಾಗಿ ಸಮರ್ಪಿಸಲಾಗುತ್ತಿದೆ. ಅವರ ಸೇವೆ, ಬದ್ಧತೆ ಹಾಗೂ ಉದ್ಯೋಗ ಮೇಳದ ಬೆಳವಣಿಗೆಯಲ್ಲಿ ಸಲ್ಲಿಸಿದ ಅಮೂಲ್ಯ ಕೊಡುಗೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಈ ಮೂಲಕ ಕೃತಜ್ಞತೆಯಿಂದ ಸ್ಮರಿಸುತ್ತದೆ ಎಂದು ಡಾ.ಆಳ್ವ ತಿಳಿಸಿದರು.
ಗೌರವ ಸನ್ಮಾನ
ಉದ್ಯೋಗ ಸೃಷ್ಟಿ, ಉದ್ಯಮಶೀಲತೆ ಹಾಗೂ ಸಮಾಜಮುಖಿ ಸೇವೆಯಲ್ಲಿ ಗಣನೀಯ ಸಾಧನೆಗೈದು ಸಮಾಜಕ್ಕೆ ಮಾದರಿಯಾಗಿರುವ ಕರಾವಳಿ ಮೂಲದ ಗಣ್ಯರಾದ ಬೆಳ್ತಂಗಡಿಯ ಮಾತೃಶ್ರೀ ಇಂಡಸ್ಟ್ರಿಯಲ್ ಪಾರ್ಕ್‌ನ ಶ್ರೀಕ್ಷೇತ್ರ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್.ಜನಾರ್ದನ, ಎಂಆರ್‌ಜಿ ಗ್ರೂಪ್‌ನ ಸಂಸ್ಥಾಪಕ ಹಾಗೂ ಅಧ್ಯಕ್ಷ ಡಾ.ಕೆ.ಪ್ರಕಾಶ್ ಶೆಟ್ಟಿ, ಭವಾನಿ ಗ್ರೂಪ್‌ನ ಸಂಸ್ಥಾಪಕ ಹಾಗೂ ಅಧ್ಯಕ್ಷ ಕುಸುಮೋದರ ಡಿ.ಶೆಟ್ಟಿ, ಪ್ರೊವಿಟ್ ಫುಡ್ಸ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ವಿನ್ಸೆಂಟ್ ಕುಟಿನ್ಹಾ ಹಾಗೂ ಎಕ್ಸ್‌ಪರ್ಟೀಸ್ ಕಾಂಟ್ರಾಕ್ಟಿಂಗ್ ಕಂಪನಿಯ ಸಹ-ಸಂಸ್ಥಾಪಕ ಮಹಮ್ಮದ್ ಅಶ್ಪಾಕ್ ಅವರಿಗೆ ಗೌರವ ಸನ್ಮಾನ ನಡೆಯಲಿದೆ ಎಂದು ಡಾ.ಆಳ್ವ ತಿಳಿಸಿದರು.
350ಕ್ಕೂ ಹೆಚ್ಚು ಕಂಪನಿ, 26,300ಕ್ಕೂ ಅಧಿಕ ಉದ್ಯೋಗಾವಕಾಶ
ಈ ಬಾರಿಯ ಉದ್ಯೋಗ ಮೇಳದಲ್ಲಿ ದೇಶ- ವಿದೇಶಗಳ 350ಕ್ಕೂ ಅಧಿಕ ಪ್ರತಿಷ್ಠಿತ ಕಂಪನಿಗಳು ಭಾಗವಹಿಸುತ್ತಿದ್ದು ಐಟಿ, ಐಟಿಇಎಸ್, ಉತ್ಪಾದನೆ, ಬ್ಯಾಂಕಿಂಗ್, ಆರೋಗ್ಯ, ಔಷಧ, ಆತಿಥ್ಯ, ಚಿಲ್ಲರೆ ವ್ಯಾಪಾರ, ಮಾಧ್ಯಮ, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ 26,300ಕ್ಕೂ ಅಧಿಕ ಉದ್ಯೋಗಾವಕಾಶಗಳು ಲಭ್ಯ ಇರಲಿವೆ.
ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಹಾಗೂ ವೃತ್ತಿಪರ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಹಾಗೂ ಅನುಭವ ಹೊಂದಿದ ಅಭ್ಯರ್ಥಿಗಳು ತಮ್ಮ ಅರ್ಹತೆಗೆ ತಕ್ಕ ಉದ್ಯೋಗ ಪಡೆಯಲು ಇದು ಅತ್ಯುತ್ತಮ ವೇದಿಕೆಯಾಗಿದೆ.
ಉಚಿತ, ಕಡ್ಡಾಯ ನೋಂದಣಿ
ಅಭ್ಯರ್ಥಿಗಳು https://alvaspragati.com/candidate-registration ಮೂಲಕ ಉಚಿತವಾಗಿ ನೋಂದಾಯಿಸಿಕೊಳ್ಳಬಹುದು. ಉದ್ಯೋಗ ಮೇಳದಲ್ಲಿ ಭಾಗವಹಿಸುವ ಕಂಪನಿಗಳ ಮಾಹಿತಿಯನ್ನು www.alvaspragati.com ವೆಬ್‌ಸೈಟ್‌ನಲ್ಲಿ ನಿರಂತರವಾಗಿ ನವೀಕರಿಸಲಾಗುತ್ತದೆ.
ವಸತಿ, ಬಸ್ ವ್ಯವಸ್ಥೆ
ಹೊರಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಆಗಮಿಸುವ ಅಭ್ಯರ್ಥಿಗಳಿಗಾಗಿ ಆ.6ರಿಂದ ಉಚಿತ ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಐಟಿಐ ಹಾಗೂ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಸೌಲಭ್ಯ ಒದಗಿಸಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ 9611750531/ 9741440490/ 9008907716/ 7975223865ನ್ನು ಸಂಪರ್ಕಿಸಬಹುದು.
ಎಲ್ಲಾ ಅಭ್ಯರ್ಥಿಗಳು ಕಡ್ಡಾಯವಾಗಿ ಆನ್‌ಲೈನ್‌ನಲ್ಲಿ ನೋಂದಾವಣೆ ಮಾಡಿಕೊಳ್ಳಬೇಕು ಎಂದು ಡಾ.ಮೋಹನ ಆಳ್ವ ತಿಳಿಸಿದರು.