ಆ.8ರಂದು ಲಯನ್ಸ್ ಜಿಲ್ಲೆ 317ಸಿ ಸಂಪುಟ ಪದಗ್ರಹಣ

ಲೋಕಬಂಧು ನ್ಯೂಸ್ | ಉಡುಪಿ, ಆ.4
ವಿಭಜಿತ ಲಯನ್ಸ್ ಜಿಲ್ಲೆ 317ಸಿ XXIVನೇ ಜಿಲ್ಲಾ ಸಂಪುಟ ಪದಗ್ರಹಣ ಸಮಾರಂಭ ಇಲ್ಲಿನ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ಆಗಸ್ಟ್ 8ರಂದು ಅಪರಾಹ್ನ 4.30ರಿಂದ ನಡೆಯಲಿದೆ ಎಂದು ಲಯನ್ಸ್ ಜಿಲ್ಲಾ ಮಾಜಿ ಗವರ್ನರ್ ಹಾಗೂ ಮಾರ್ಗದರ್ಶಕ ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಲಯಲ್ಸ್ ಜಿಲ್ಲಾ ಗವರ್ನರ್ ರಾಜೀವ್ ಕೋಟ್ಯಾನ್ ಅಧ್ಯಕ್ಷತೆ ವಹಿಸುವರು. ಪ್ರಥಮ ಮಹಿಳೆ ವೀಣಾ ಆರ್. ಕೋಟ್ಯಾನ್ ಉದ್ಘಾಟಿಸುವರು. ಲಯನ್ಸ್ ಕ್ಲಬ್ ಕುಂದಾಪುರ ಸಿಟಿ ಸೆಂಟರ್‌ನ ಅಧ್ಯಕ್ಷ ಪ್ರಸಾದ್ ಕುಮಾರ್ ಕೋಡಿ ಮತ್ತು ಸದಸ್ಯರು ಕಾರ್ಯಕ್ರಮದ ಆತಿಥ್ಯ ವಹಿಸಿದ್ದಾರೆ.


ಪದಗ್ರಹಣ ಅಧಿಕಾರಿಯಾಗಿ ಲಯನ್ಸ್ ಮಾಜಿ ಅಂತರರಾಷ್ಟ್ರೀಯ ನಿರ್ದೇಶಕ, ಖ್ಯಾತ ತರಬೇತುದಾರ ಪಂಕಜ್ ಮೆಹ್ರಾ ಭಾಗವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅಂತರರಾಷ್ಟ್ರೀಯ ಮಾಜಿ ನಿರ್ದೇಶಕ ವಂಶಿಧರ್ ಬಾಬು, ಕೃಷ್ಣ ರೆಡ್ಡಿ ಮತ್ತು ಮಲ್ಟಿಪಲ್'ನ ಅಧ್ಯಕ್ಷರಾದ ಅಶ್ವತ್ಥನಾರಾಯಣ್ ಮತ್ತು ರಾಮಚಂದ್ರನ್ ಭಾಗವಹಿಸಲಿದ್ದಾರೆ.


ಪ್ರಥಮ ಉಪ ಜಿಲ್ಲಾ ಗವರ್ನರ್ ಹರಿಪ್ರಸಾದ್ ರೈ ಮತ್ತು ದ್ವಿತೀಯ ಉಪ ಜಿಲ್ಲಾ ಗವರ್ನರ್ ರಮಾನಂದ ಕೆ., ಸಂಪುಟ ಕಾರ್ಯದರ್ಶಿ ಸದಾನಂದ ನಾವಡ, ಕೋಶಾಧಿಕಾರಿ ವಿನೋದ್ ನಾರಾಯಣ ಮತ್ತು ಸಂಪುಟ ಸದಸ್ಯರ ಪದಗ್ರಹಣ ನಡೆಯಲಿದೆ.


ಲಯನ್ಸ್ ಜಿಲ್ಲೆಯ XXIV ಲಯನ್ಸ್ ಕ್ಲಬ್‌ಗಳ ಪದಾಧಿಕಾರಿಗಳು, ಮಾಜಿ ಜಿಲ್ಲಾ ಗವರ್ನರ್‌ಗಳು, ಲಯನ್ಸ್ ಸದಸ್ಯರು, ಅತಿಥಿಗಳು ಹಾಗೂ ಸುಮಾರು 1,000 ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದರು.


ಪದಗ್ರಹಣ ಸಮಿತಿ ಮುಖ್ಯ ಸಲಹೆಗಾರರಾಗಿ ಮಾಜಿ ಜಿಲ್ಲಾ ಗವರ್ನರ್‌ಗಳಾದ ಜಯ ಶೆಟ್ಟಿ ಇಂದ್ರಾಳಿ, ಎನ್. ಎಮ್. ಹೆಗಡೆ ಮತ್ತು ಬಿ. ಅರುಣ್ ಕುಮಾರ್ ಹೆಗಡೆ, ಅಧ್ಯಕ್ಷ ಸಿದ್ದರಾಜು, ಕಾರ್ಯದರ್ಶಿ ಪ್ರಕಾಶಚಂದ್ರ, ಕೋಶಾಧಿಕಾರಿ ಒ. ಸೋಮನಾಥ್ ಹೆಗಡೆ ಕಾರ್ಯಕ್ರಮ ಸಂಯೋಜಕರಾಗಿದ್ದಾರೆ.


ವಿಭಜಿತ ಲಯನ್ಸ್ 317ಸಿ ಉಡುಪಿ ಮತ್ತು ಭಟ್ಕಳದ ವ್ಯಾಪ್ತಿಯ ಲಯನ್ಸ್ ಕ್ಲಬ್‌ಗಳನ್ನು ಒಳಗೊಂಡಿದೆ ಎಂದು ಜಯಕರ ಶೆಟ್ಟಿ ವಿವರಿಸಿದರು.


ಕ್ರಿಯಾಶೀಲ ಸದಸ್ಯ
ನೂತನ ಗವರ್ನರ್ ರಾಜೀವ್ ಕೋಟ್ಯಾನ್ ಓರ್ವ ಕ್ರಿಯಾಶೀಲ , ಸಮಾಜಮುಖಿ ಸದಸ್ಯರಾಗಿ 40 ವರ್ಷಗಳಿಂದ ನಿರಂತರವಾಗಿ ಸೇವಾ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಚಕ್ರವರ್ತಿ ಕ್ರಿಕೆಟರ್ಸ್ ಮೂಲಕ ಅತ್ಯುತ್ತಮ ಕ್ರೀಡಾಪಟುವಾಗಿದ್ದಾರೆ. ಕುಂದಾಪುರ ಪುರಸಭೆ ಉಪಾಧ್ಯಕ್ಷರಾಗಿದ್ದ ಅವರು ಹಲವಾರು ಸಂಘಟನೆಗಳಲ್ಲಿ ತೊಡಗಿಕೊಂಡಿದ್ದಾರೆ.


ಅವರ ಪತ್ನಿ ವೀಣಾ ಆರ್. ಕೋಟ್ಯಾನ್‌ ಅವರು ಕುಂದಾಪುರ ಸಿಟಿ ಸೆಂಟರ್‌ನ ಅಧ್ಯಕ್ಷೆಯಾಗಿ ಹಲವಾರು ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಪ್ರಸ್ತುತ ವರ್ಷ ಈಗಾಗಲೇ ಹಾಂಕಾಂಗ್ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಅಂತರಾಷ್ಟ್ರೀಯ ನಾಯಕರ ಸಮ್ಮುಖದಲ್ಲಿ ಪದಗ್ರಹಣಗೈದಿರುವ ಅವರು ಪ್ರಸಕ್ತ ವರ್ಷ ಹಲವಾರು ಸೇವಾ ಯೋಜನೆ ಹಮ್ಮಿಕೊಳ್ಳಲು ಉದ್ದೇಶಿಸಿದ್ದಾರೆ.


ಮಳೆ ನೀರು ಸಂಗ್ರಹ, ಕಲೆ ಕೌಶಲ್ಯಗಳಿಗೆ ಉತ್ತೇಜನ, ಜ್ಞಾನದೀಪ ಯೋಜನೆ, ನಿರಂತರ ಕಣ್ಣಿನ ಶಸ್ತ್ರಕ್ರಿಯೆ ಕಾರ್ಯಕ್ರಮ, ಹಿರಿಯ ನಾಗರಿಕರು ಮತ್ತು‌ ದಿವ್ಯಾಂಗರು, ಬುದ್ದಿಮಾಂದ್ಯರಿಗೆ ನೆರವು, ಯುವಕರು ಮತ್ತು ಮಹಿಳಾ ಸಬಲೀಕರಣ, ಉದ್ಯೋಗ ಮೇಳ ಇನ್ನಿತರ ಸೇವಾ ಕಾರ್ಯಕ್ರಮಗಳೊಂದಿಗೆ ಸಂಸ್ಥೆಯ ಗೌರವ‌ ಹೆಚ್ಚಿಸುವ ಆಶಯ ಹೊಂದಿದ್ದಾರೆ ಎಂದರು.


ನೂತನ ಗವರ್ನರ್ ರಾಜೀವ್ ಕೋಟ್ಯಾನ್ ಮಾತನಾಡಿ, 2026-27ನೇ ಸಾಲಿನಲ್ಲಿ ಉಡುಪಿ ಜಿಲ್ಲೆಯಾದ್ಯಂತ ವಿವಿಧ ಜನೋಪಯೋಗಿ ಸೇವಾ ಕಾರ್ಯಕ್ರಮ ಹಮ್ಮಿಕೊಳ್ಳುವ ಗುರಿಯನ್ನು ಲಯನ್ಸ್ ಕ್ಲಬ್‌ಗಳು ಹೊಂದಿವೆ‌. ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 75 ಲಯನ್ಸ್ ಕ್ಲಬ್‌ಗಳಲ್ಲಿ 2,500ಕ್ಕೂ ಹೆಚ್ಚು ಸದಸ್ಯರು ಸೇವಾ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ.


ಪ್ರತಿಯೊಂದು ಕ್ಲಬ್‌ನಿಂದ ಪರಿಸರ ಸಂರಕ್ಷಣೆ, ಆರೋಗ್ಯ, ಶಿಕ್ಷಣ, ಕುಡಿಯುವ ನೀರಿನ ಯೋಜನೆ, ಆರ್ಥಿಕವಾಗಿ ಹಿಂದುಳಿದವರ ಹಸಿವು ನಿವಾರಣೆ, ಮಧುಮೇಹ ತಡೆಗಟ್ಟುವಿಕೆ, ಯುವಜನರಿಗೆ ಉದ್ಯೋಗ ಮಾಹಿತಿ, ಕ್ಯಾನ್ಸರ್ ಪೀಡಿತ ಮಕ್ಕಳಿಗೆ ನೆರವು ಹಾಗೂ ರಕ್ತದಾನ ಶಿಬಿರ ಇತ್ಯಾದಿ ಆಯೋಜಿಸಲಾಗುವುದು ಎಂದರು.


ಈ ವರ್ಷ ಸುಮಾರು 10 ಸಾವಿರ ಯೂನಿಟ್ ರಕ್ತ ಸಂಗ್ರಹಿಸುವ ಗುರಿ ಹೊಂದಲಾಗಿದ್ದು, ಸುಮಾರು 10 ಸಾವಿರ ಪ್ರಾಥಮಿಕ ಶಾಲಾ ವಿದ್ಯಾರ್ಥಿನಿಯರ ಕಣ್ಣಿನ ತಪಾಸಣೆ ನಡೆಸಿ ಉಚಿತ ಕನ್ನಡಕ ವಿತರಿಸಲಾಗುವುದು ಎಂದರು.


ಸರ್ಕಾರಿ ಶಾಲೆಗಳ ಮಧ್ಯಾಹ್ನದ ಉಚಿತ ಊಟ (ಅನ್ನದಾಸೋಹ) ಕಾರ್ಯಕ್ರಮಗಳಲ್ಲಿ ಲಯನ್ಸ್ ಕ್ಲಬ್‌ಗಳು ಸಕ್ರಿಯವಾಗಿ ಭಾಗವಹಿಸಲಿವೆ. 2026-27ನೇ ಸಾಲಿನಲ್ಲಿ ಜಿಲ್ಲೆಯ ಎಲ್ಲ ಸಮುದಾಯಗಳ ಸುಮಾರು 2 ಲಕ್ಷಕ್ಕೂ ಹೆಚ್ಚು ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಅಗತ್ಯವಿರುವವರಿಗೆ ನೆರವಿನ ಹಸ್ತ ನೀಡುವ ಮಹತ್ವಾಕಾಂಕ್ಷೆಯ ಗುರಿ ಹೊಂದಲಾಗಿದೆ ಎಂದು ರಾಜೀವ್ ಕೋಟ್ಯಾನ್ ಹೇಳಿದರು.


ಸುದ್ದಿಗೋಷ್ಟಿಯಲ್ಲಿ ಲಯನ್ಸ್ ಇಂಟರ್ ನ್ಯಾಷನಲ್ ಡಿಸ್ಟ್ರಿಕ್ಟ್ 317ಸಿ ಪ್ರಥಮ ಉಪ ಜಿಲ್ಲಾ ಗವರ್ನರ್ ಹರಿಪ್ರಸಾದ್ ರೈ ಮಣಿಪಾಲ, ಅಧ್ಯಕ್ಷ ಸಿದ್ದರಾಜು, ಕಾರ್ಯದರ್ಶಿ ಪ್ರಕಾಶ್ಚಂದ್ರ, ಸಂಪುಟ ಕಾರ್ಯದರ್ಶಿ ಸದಾನಂದ ನಾವಡ ಮೊದಲಾದವರಿದ್ದರು.