ಮಣಿಪಾಲ ಕೆಫೆಯಲ್ಲಿ ಹುಕ್ಕಾ ಸೇವನೆ: 8 ಮಂದಿ ವಿರುದ್ಧ ಕೇಸು

ಲೋಕಬಂಧು ನ್ಯೂಸ್ | ಮಣಿಪಾಲ, ಆ.7
ಶಿವಳ್ಳಿ ಗ್ರಾಮದ ವಿದ್ಯಾರತ್ನ ನಗರದಲ್ಲಿರುವ ಐರಿಸ್ ಪ್ಲಾಜ಼ಾ ಕಟ್ಟಡದ ಮೊದಲ ಮಹಡಿಯ ಡ್ರಂಕ್ ಲ್ಯಾಬ್ ಕೆಫೆಗೆ ಮಣಿಪಾಲ ಪೊಲೀಸರು ದಾಳಿ ನಡೆಸಿದ್ದು, ಆ ವೇಳೆ ನಿಷೇಧಿತ ಹುಕ್ಕಾ ಸೇವನೆ ಮಾಡುತ್ತಿದ್ದ 8 ಮಂದಿ ಯುವಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಕ್ರಮವಾಗಿ ಹುಕ್ಕಾ ಸೇವನೆ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ, ಹುಕ್ಕಾ ಉಪಕರಣಗಳು ಹಾಗೂ ತಂಬಾಕು ಪ್ಲೇವರ್ ಪ್ಯಾಕ್'ಗಳನ್ನು ವಶಪಡಿಸಿಕೊಂಡಿದ್ದಾರೆ.


ಗುರುವಾರ ರಾತ್ರಿ ಸುಮಾರು 9.35ರಿಂದ ಮಧ್ಯರಾತ್ರಿ 12 ಗಂಟೆ ವರೆಗೆ ನಡೆದ ಕಾರ್ಯಾಚರಣೆ ವೇಳೆ ಎರಡು ಪ್ರತ್ಯೇಕ ಕ್ಯಾಬಿನ್'ಗಳಲ್ಲಿ ಒಟ್ಟು 8 ಮಂದಿ ಹುಕ್ಕಾ ಸೇವಿಸುತ್ತಿರುವುದು ಪತ್ತೆಯಾಗಿದೆ.


ಸ್ಥಳದಿಂದ ಮೂರು ಹುಕ್ಕಾ ಸೆಟ್‌ಗಳು, ತಂಬಾಕು ಮಿಶ್ರಿತ ಹುಕ್ಕಾ ಫ್ಲೇವರ್ ಪ್ಯಾಕ್'ಗಳು ಸೇರಿದಂತೆ ಒಟ್ಟು ಸುಮಾರು 4 ಸಾವಿರ ರೂ. ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.


ಹುಕ್ಕಾ ಸೇವನೆಗಾಗಿ ಕೆಲವರು ಆನ್‌ಲೈನ್ ಮೂಲಕ ಹಣ ಪಾವತಿಸಿರುವುದೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ.


ಈ ಸಂಬಂಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.


ಪ್ರಕರಣ ಸಂಬಂಧ ಕೆಫೆ ಮ್ಯಾನೇಜರ್ ಬಂಟ್ವಾಳ ಮಣ್ಣೂರು ಗ್ರಾಮದ ತೋಟಹೌಸ್ ನಿವಾಸಿ ಮೊಹಮ್ಮಸ್ ಶಫಾನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.