ಲೋಕಬಂಧು ನ್ಯೂಸ್ | ಉಡುಪಿ, ಆ.11
ಕುಂದಾಪುರದಿಂದ ಹೆಜಮಾಡಿ ವರೆಗೆ ಮತ್ತು ಹೆಜಮಾಡಿಯಿಂದ ಕೇರಳದ ಗಡಿ ವರೆಗಿನ ಎನ್ಎಚ್ 66ರ ಹೆಚ್ಚುವರಿ ರಸ್ತೆ ಕಾಮಗಾರಿಗೆ ಡಿಪಿಆರ್ ಸಿದ್ಧಪಡಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈಗಾಗಲೇ ಸಲಹಾ ಸಂಸ್ಥೆಯೊಂದನ್ನು ನೇಮಿಸಿದ್ದು ಕಳೆದ ಮೇ 14ರಿಂದ ಯೋಜನಾ ವರದಿ ಸಿದ್ಧತೆಯಲ್ಲಿ ತೊಡಗಿದೆ.
ಕುಂದಾಪುರದಿಂದ ಪ್ರಾರಂಭವಾಗಿ ಹೆಜಮಾಡಿ ವರೆಗಿನ ಸಂಚಾರ ದಟ್ಟಣೆ, ರಸ್ತೆ ಸುರಕ್ಷತೆಯ ಆವಶ್ಯಕತೆ, ಎನ್ಎಚ್ 66ರ ಇಕ್ಕೆಲಗಳಲ್ಲಿ ಸರ್ವಿಸ್ ರಸ್ತೆಗಳು, ಅಗತ್ಯವಿರುವಡೆ ಫ್ಲೈ ಓವರ್'ಗಳು, ಆವಶ್ಯಕತೆಗನುಗುಣವಾಗಿ ಹೆಚ್ಚುವರಿ ಅಂಡರ್ ಪಾಸ್'ಗಳು ಒಟ್ಟಾರೆ ಅಪಘಾತ ರಹಿತ ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ಪ್ರಸ್ತುತ ಯೋಜನಾ ವರದಿ ಸಿದ್ದವಾಗುತ್ತಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಲಿಖಿತ ಪ್ರಶ್ನೆಗೆ ಉತ್ತರಿಸಿದ್ದಾರೆ.
ಕುಂದಾಪುರದಿಂದ ಹೆಜಮಾಡಿ ಹಾಗೂ ಕೇರಳದ ಗಡಿಯಲ್ಲಿ ಅಪಾರ ವಾಹನ ದಟ್ಟಣೆಯಿಂದ ಆಗಬಹುದಾದ ಅವಘಡಗಳ ಹಿನ್ನೆಲೆಯಲ್ಲಿ ಸಂಸದ ಕೋಟ ಅವರು ವಿವರವಾದ ಪ್ರಶ್ನೆ ಕೇಳಿದ್ದರು.
ಕಲ್ಯಾಣಪುರ- ಸಂತೆಕಟ್ಟೆ ಮೇಲ್ಸೇತುವೆ, ಅಂಬಲಪಾಡಿಯ ಬ್ರಿಡ್ಜ್ ಮತ್ತು ಕಟಪಾಡಿಯ ಅಂಡರ್ ಪಾಸ್ ಪ್ರಗತಿ ಬಗ್ಗೆ ಸಚಿವ ಗಡ್ಕರಿ ಅವರಿಗೆ ಅಭಿನಂದನೆ ತಿಳಿಸಿದ ಸಂಸದ ಕೋಟ, ಪರ್ಕಳ ಸಹಿತ ಉಳಿದ ಕಾಮಗಾರಿಗೆ ವೇಗ ನೀಡಲು ಕೋರಿದರು.
ಸಂತೆಕಟ್ಟೆಯ ಮೇಲ್ಸೇತುವೆ ಬಳಿಯ ಹೋಟೆಲ್ ದೋಣಿಮನೆ ಎದುರಿನ ಉಳಿದ ಕಾಮಗಾರಿ ಬಗ್ಗೆ ಉಲ್ಲೇಖಿಸಿ, ಶೀಘ್ರದಲ್ಲಿ ಕೆಲಸ ಆರಂಭಿಸುವುದಾಗಿ ಸಚಿವ ಗಡ್ಕರಿ ಲಿಖಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ ಎಂದು ಸಂಸದ ಕೋಟ ತಿಳಿಸಿದ್ದಾರೆ.
