ಲೋಕಬಂಧು ನ್ಯೂಸ್ | ಮುಂಬೈ, ಆ.11
ಜೀವನದಲ್ಲಿ ಹಣ ಸಂಪಾದನೆ ಮಾಡಬೇಕು. ಜೀವನ ನಿರ್ವಹಣೆಗೆ ಹಣ ಅತ್ಯಂತ ಆವಶ್ಯಕ. ಆದರೆ, ಹಣ ಸಂಪಾದನೆಯೊಂದೇ ನಮ್ಮ ಜೀವನದ ಗುರಿಯಾಗಬಾರದು. ಹಣದ ಜೊತೆಗೆ ಪುಣ್ಯವನ್ನೂ ಸಂಪಾದಿಸಬೇಕು. ಏಕೆಂದರೆ ಹಣ ನಮ್ಮನ್ನು ಈ ಲೋಕದಲ್ಲಿ ಸ್ವಲ್ಪಕಾಲ ಮಾತ್ರ ರಕ್ಷಿಸಬಲ್ಲದು. ಆದರೆ, ನಾವು ಮಾಡಿದ ಪುಣ್ಯಕಾರ್ಯಗಳು ನಮ್ಮನ್ನು ಸದಾ ಮತ್ತು ಶಾಶ್ವತವಾಗಿ ರಕ್ಷಿಸುತ್ತವೆ ಎಂದು ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದರು.
ನವಿಮುಂಬೈ ವಾಶಿಯಲ್ಲಿನ ಪುತ್ತಿಗೆ ಶಾಖಾಮಠದಲ್ಲಿ ಮಂಗಳವಾರ ನಡೆದ ಶ್ರೀಗಳ ಚಾತುರ್ಮಾಸ್ಯ ಪುರಪ್ರವೇಶದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಗಳಿಸಿದ ಹಣವನ್ನು ಕೇವಲ ನಮಗಾಗಿ ಸಂಗ್ರಹಿಸಿಡಬಾರದು. ಅದರಲ್ಲಿ ಒಂದು ಭಾಗವನ್ನು ದೇವರ ಸೇವೆಗೆ, ಧಾರ್ಮಿಕ ಕಾರ್ಯಗಳಿಗೆ, ದಾನ– ದಕ್ಷಿಣೆಗೆ, ಜ್ಞಾನ ಪ್ರಸಾರಕ್ಕೆ ಹಾಗೂ ಬಡವರು ಮತ್ತು ಅಸಹಾಯಕರ ಸೇವೆಗೆ ವಿನಿಯೋಗಿಸಬೇಕು. ಹಣವನ್ನು ಸತ್ಕಾರ್ಯಗಳಿಗೆ ಬಳಸಿದಾಗ ಅದು ಪುಣ್ಯವಾಗಿ ಪರಿವರ್ತನೆಯಾಗುತ್ತದೆ.
ಪುಸ್ತಕಗಳ ಪ್ರಕಟಣೆ ಮತ್ತು ವಿತರಣೆಯ ಉದ್ದೇಶವೂ ಕೇವಲ ಹಣ ಸಂಪಾದನೆಯಲ್ಲ. ಉತ್ತಮ ವಿಚಾರ ಮತ್ತು ಜ್ಞಾನವನ್ನು ಜನರಿಗೆ ತಲುಪಿಸುವ ಮೂಲಕ ಪುಣ್ಯವನ್ನು ಸಂಪಾದಿಸುವುದೇ ಅದರ ಮುಖ್ಯ ಉದ್ದೇಶ. ಒಂದು ಒಳ್ಳೆಯ ಪುಸ್ತಕವನ್ನು ಓದುವುದರಿಂದ ಅಥವಾ ಮತ್ತೊಬ್ಬರಿಗೆ ಓದಲು ನೀಡುವುದರಿಂದ ಜ್ಞಾನ ಬೆಳೆಯುತ್ತದೆ,ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ಇಂಥ ಜ್ಞಾನ ಸೇವೆಯೂ ಶ್ರೇಷ್ಠವಾದ ಪುಣ್ಯಕಾರ್ಯವಾಗಿದೆ ಎಂದು ಶ್ರೀಪಾದರು ಹೇಳಿದರು.
ಹಣ, ಸಂಪತ್ತು ಶಾಶ್ವತವಲ್ಲ, ಅದನ್ನು ಇನ್ನೊಬ್ಬರು ಕಸಿದುಕೊಳ್ಳಬಹುದು. ಆದರೆ, ಸತ್ಕಾರ್ಯಗಳಿಂದ ಸಂಪಾದಿಸಿದ ಪುಣ್ಯವನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಹಣವನ್ನು ಸಂಗ್ರಹಿಸಿಡುವುದರಿಂದ ಮಾತ್ರ ಮನಃಶಾಂತಿ ದೊರೆಯುವುದಿಲ್ಲ. ಅದನ್ನು ಸತ್ಕಾರಗಳಿಗೆ ಬಳಸಿದಾಗ ಆತ್ಮತೃಪ್ತಿ, ನೆಮ್ಮದಿ ಮತ್ತು ದೈವಾನುಗ್ರಹ ದೊರೆಯುತ್ತದೆ. ಆದ್ದರಿಂದ ನಾವು ಹಣ ಸಂಪಾದಿಸುವುದರೊಂದಿಗೆ ಪುಣ್ಯ ಸಂಪಾದನೆಗೂ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಹಣ ತಾತ್ಕಾಲಿಕ ಸಂಪತ್ತು, ಪುಣ್ಯ ಶಾಶ್ವತವಾದ ಸಂಪತ್ತು. ಪುಣ್ಯವೇ ನಮ್ಮ ನಿಜವಾದ ಶಕ್ತಿ, ರಕ್ಷಣೆ ಮತ್ತು ಶಾಂತಿಯ ಮೂಲ ಎಂದು ಪುತ್ತಿಗೆ ಶ್ರೀಗಳು ಪ್ರತಿಪಾದಿಸಿದರು.
ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಶಿವರಾಮ ಶೆಟ್ಟಿ, ಉಪಾಧ್ಯಕ್ಷರಾದ ಗೋಪಾಲ ವೈ. ಶೆಟ್ಟಿ ಮತ್ತು ಎನ್.ಆರ್.ರೈ, ಕಾರ್ಯಾಧ್ಯಕ್ಷ ಧರ್ಮದರ್ಶಿ ಅಣ್ಣಿ ಶೆಟ್ಟಿ, 'ಗೋಕುಲ'ದ ಮಾಜಿ ಅಧ್ಯಕ್ಷ ಡಾ.ಸುರೇಶ್ ರಾವ್ ಕಟೀಲು, ಅದಮಾರು ಮಠದ ಮುಖ್ಯ ಪ್ರಬಂಧಕ ರಾಜೇಶ್ ಭಟ್ ಹಾಗೂ ನೆಹರೂ ನಗರ ಸಂತೋಷ್ ಶೆಟ್ಟಿ, ಶ್ರೀಮಠದ ಅಂತರರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಶ್ರೀಗಳ ಆಪ್ತ ಕಾರ್ಯದರ್ಶಿ ರತೀಶ ತಂತ್ರಿ ಮೊದಲಾದವರಿದ್ದರು.
