ಪೊಲೀಸ್ ಆಯುಕ್ತರ ಮೊಹರು ದುರ್ಬಳಕೆ ಆರೋಪ: ಮಹಿಳಾ ಸಿಬ್ಬಂದಿ ವಿರುದ್ಧ ಪ್ರಕರಣ

ಲೋಕಬಂಧು ನ್ಯೂಸ್ | ಮಂಗಳೂರು, ಆ.10
ಪೊಲೀಸ್ ಆಯುಕ್ತರ ಕಚೇರಿಯ ಮೊಹರು ದುರ್ಬಳಕೆ ಮಾಡಿ ವೈದ್ಯಕೀಯ ವೆಚ್ಚದ ಮರುಪಾವತಿಗೆ ಸಂಬಂಧಿಸಿದ ದಾಖಲೆಗಳಲ್ಲಿ ಅಕ್ರಮ ನಡೆಸಿದ ಆರೋಪದಡಿ ಮಹಿಳಾ ಸಿಬ್ಬಂದಿಯೊಬ್ಬರ ವಿರುದ್ಧ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರ ಪೊಲೀಸ್ ಆಯುಕ್ತರ ಕಚೇರಿಯ ಲೆಕ್ಕ ಶಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಯಶಸ್ವಿನಿ ಎಸ್.ಟಿ. ವಿರುದ್ಧ ಅಕೌಂಟ್ಸ್ ಸೂಪರಿಂಟೆಂಡೆಂಟ್ ವಂಡಾಲ್ಕರ್ ಅವರು ದೂರು ನೀಡಿದ್ದಾರೆ.


ದೂರಿನ ಪ್ರಕಾರ, ತನ್ನ ಪತಿಯ ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದ ವೈದ್ಯಕೀಯ ವೆಚ್ಚದ ಮರುಪಾವತಿಗಾಗಿ ಸಲ್ಲಿಸಿದ್ದ ಬಿಲ್‌ಗಳಲ್ಲಿ ನಿಗದಿತ ಮೊತ್ತಕ್ಕಿಂತ ಹೆಚ್ಚಿನ ಹಣವನ್ನು ಮರುಪಾವತಿಗೆ ಕೋರಲಾಗಿದೆ ಎಂದು ಆರೋಪಿಸಲಾಗಿದೆ.


15,398 ರೂ. ಮೊತ್ತದ ಬಿಲ್‌ಗೆ 1,95,243 ರೂ. ಹಾಗೂ 65,831 ಮೊತ್ತದ ಮತ್ತೊಂದು ಬಿಲ್‌ಗೂ 1,95,243 ರೂ. ಹೀಗೆ ಒಟ್ಟು 81,229 ರೂ. ಮೊತ್ತದ ಬಿಲ್‌ಗಳಿಗೆ 4,81,488 ರೂ. ಮರುಪಾವತಿಗೆ ಕೋರಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.


ಅಲ್ಲದೆ, ವೈದ್ಯಕೀಯ ಬಿಲ್‌ಗಳ ಮಂಜೂರಾತಿಗೆ ಸಲ್ಲಿಸಿದ ದಾಖಲೆಗಳಲ್ಲಿ ಪೊಲೀಸ್ ಆಯುಕ್ತರ ಕಚೇರಿಯ ಮೊಹರನ್ನು ಬಳಸಿಕೊಂಡು ಸಹಿ ದುರ್ಬಳಕೆ ಮಾಡಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.


ಆ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.