ಲೋಕಬಂಧು ನ್ಯೂಸ್ | ಮೂಡುಬಿದಿರೆ, ಆ.8
ಉದ್ಯೋಗಕ್ಕೆ ಶಿಕ್ಷಣದ ಜೊತೆಗೆ ಕೌಶಲ್ಯದ ಆವಶ್ಯಕತೆ ಇದೆ. ವಿದ್ಯಾರ್ಥಿಗಳು ಕ್ಲಾಸಿನಲ್ಲಿ ಮಾತ್ರ ಸ್ಮಾರ್ಟ್ ಆಗಿರದೆ ಸ್ಟ್ರೀಟ್ ಸ್ಮಾರ್ಟ್ ಆಗಿದ್ದರೆ ಮಾತ್ರ ಕಂಪನಿಗಳು ಕರೆದು ಉದ್ಯೋಗದ ಅವಕಾಶ ನೀಡುತ್ತವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಹೇಳಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಎರಡು ದಿನಗಳ ಕಾಲ ಆಯೋಜಿಸಿರುವ ದೇಶದ ಅತಿ ದೊಡ್ಡ ಉಚಿತ ಉದ್ಯೋಗ ಮೇಳ 'ಆಳ್ವಾಸ್ ಪ್ರಗತಿ-2026'ರ 16ನೇ ಆವೃತ್ತಿಯನ್ನು ವಿದ್ಯಾಗಿರಿಯ ಡಾ.ವಿ.ಎಸ್.ಆಚಾರ್ಯ ಸಭಾಂಗಣದ ದಿ. ಎ.ಕೆ.ಮಹೇಶ್ ಶೇಖ್ ವೇದಿಕೆಯಲ್ಲಿ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.
ರಾಜಕರಣಿಗಳು ಮಾರ್ಕ್ಸ್‌ನಲ್ಲಿ ಸ್ಮಾರ್ಟ್ ಆಗಿರದಿದ್ದರೂ ಸ್ಪೀಟ್ ಸ್ಮಾರ್ಟ್ ಆಗಿರುವುದರಿಂದಲೇ ಎಲ್ಲಾ ಜಂಜಾಟಗಳನ್ನು ನಿಭಾಯಿಸುವ ಶಕ್ತಿ ಬಂದಿದೆ ಎಂದ ಅವರು, ಯಾವುದೇ ಕಂಪನಿಯಲ್ಲಿ ನಿಮಗೆ ಉದ್ಯೋಗ ಸಿಕ್ಕಿದರೆ ಪ್ರಾಮಾಣಿಕತೆ ಮತ್ತು ಬದ್ಧತೆಯೊಂದಿಗೆ ಕೆಲಸ ಮಾಡಿ, ವಿವಿಧ ಕಾರಣಗಳನ್ನು ನೀಡಿ ಕೆಲಸ ಬಿಡಬೇಡಿ. ಕರಾವಳಿಯ ಯುವಜನತೆ ನಂಬಿಕೆಗೆ ಆರ್ಹರು ಎಂಬ ಹೆಸರನ್ನು ಉಳಿಸಿ ಮಾದರಿಯಾಗಿ ಎಂದು ಕಿವಿಮಾತು ಹೇಳಿದರು.
ಶಿಕ್ಷಣದಲ್ಲಿ ಎಐ ಬಳಸಿಕೊಳ್ಳಿ
ಇಂದು ಪ್ರತಿಯೊಬ್ಬನಿಗೂ ಎ.ಐ.ಯ ಆವಶ್ಯಕತೆಯಿದೆ. ವಿದ್ಯಾರ್ಥಿಗಳು ಎಐನಲ್ಲಿ ಎಕ್ಸ್‌ಪರ್ಟ್ ಆಗವಂಥ ಕೆಲಸ ಮಾಡಿ. ಇದು ಯಾವುದೇ ಯಾರ ಕೆಲಸವನ್ನು ತೆಗೆಯುವುದಿಲ್ಲ, ಬದಲಾಗಿ ನಿಮ್ಮನ್ನು ಹೆಚ್ಚು ಸ್ಮಾರ್ಟ್ ಮಾಡುತ್ತದೆ ಮತ್ತು ಬೇರೆ ಬೇರೆ ಕಡೆ ಅವಕಾಶಗಳು ಸಿಗುತ್ತದೆ. ಶಿಕ್ಷಣ ಸಂಸ್ಥೆಗಳು ಕೂಡಾ ಡಿಗ್ರಿ ಜೊತೆಗೆ ಎ.ಐ ಶಿಕ್ಷಣವನ್ನು ಸೇರ್ಪಡೆಗೊಳಿಸಿದರೆ ಉತ್ತಮ. ಇಲ್ಲದಿದ್ದರೆ 10 ವರ್ಷಗಳ ನಂತರ ಉದ್ಯೋಗದಲ್ಲಿ ಸಮಸ್ಯೆಯಾಗಬಹುದು ಎಂದು ಸಚಿವ ಯು.ಟಿ.ಖಾದರ್ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮೂಲ್ಕಿ- ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ತನ್ನ ಕ್ಷೇತ್ರದಲ್ಲಿರುವ ಆಳ್ವಾಸ್‌ನಲ್ಲಿ ಉದ್ಯೋಗ ಮೇಳ ನಡೆಯುತ್ತಿರುವುದು ತನಗೆ ಹೆಮ್ಮೆ ಎಂದರು.
ದ.ಕ. ಸಂಸದ ಕ್ಯಾ.ಬೃಜೇಶ್ ಚೌಟ ಮುಖ್ಯ ಅತಿಥಿಯಾಗಿ ಭಾಗವಹಿಸಿ, ನವೋದ್ಯಮವನ್ನು ದೊಡ್ಡ ಮಟ್ಟಕ್ಕೆ ಹೇಗೆ ಬೆಳೆಸಬಹುದು ಎಂದು ತೋರಿಸಿಕೊಟ್ಟವರು ಡಾ.ಎಂ.ಮೋಹನ ಆಳ್ವ. ಯಾವುದೇ ಕಾರ್ಯಕ್ರಮವನ್ನು ವ್ಯವಸ್ಥಿತ ರೀತಿಯಲ್ಲಿ ಮಾಡುವ, ಸಮಾಜಮುಖಿಯಾಗಿ ಯೋಚನೆ ಮಾಡಿ ರಾಷ್ಟ್ರ ನಿರ್ಮಾಣದಲ್ಲಿ ದೊಡ್ಡ ಪಾತ್ರ ವಹಿಸುವ ಮೂಲಕ ಭಾರತಕ್ಕೆ ಮಾಡೆಲ್ ಆಗಿದ್ದಾರೆ ಎಂದರು.
ಕರಾವಳಿ ಸಾಧಕರಿಗೆ ಗೌರವ ಸನ್ಮಾನ
ಉದ್ಯೋಗ ಸೃಷ್ಟಿ, ಉದ್ಯಮಶೀಲತೆ ಹಾಗೂ ಸಮಾಜ ಸಮಾಜಮುಖಿ ಸೇವೆಯಲ್ಲಿ ಗಣನೀಯ ಸಾಧನೆಗೈದು ಸಮಾಜಕ್ಕೆ ಮಾದರಿಯಾಗಿರುವ ಬೆಳ್ತಂಗಡಿಯ ಮಾತೃಶ್ರೀ ಇಂಡಸ್ಟ್ರಿಯಲ್ ಪಾರ್ಕ್‌ನ ಶ್ರೀಕ್ಷೇತ್ರ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್.ಜನಾರ್ದನ, ಎಂಆರ್‌ಜಿ ಗ್ರೂಪ್‌ನ ಸಂಸ್ಥಾಪಕ ಹಾಗೂ ಅಧ್ಯಕ್ಷ ಡಾ.ಕೆ.ಪ್ರಕಾಶ್ ಶೆಟ್ಟಿ, ಭವಾನಿ ಗ್ರೂಪ್ ಸಂಸ್ಥಾಪಕ ಹಾಗೂ ಅಧ್ಯಕ್ಷ ಕುಸುಮೋದರ ಡಿ.ಶೆಟ್ಟಿ, ಪ್ರೊವಿಟ್ ಫುಡ್ಸ್ ಪ್ರೈವೇಟ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ವಿನ್ಸೆಂಟ್ ಕುಟಿನ್ಹಾ ಹಾಗೂ ಎಕ್ಸ್‌ಪರ್ಟೀಸ್ ಕಾಂಟ್ರಾಕ್ಟಿಂಗ್ ಕಂಪನಿಯ ಸಹ-ಸಂಸ್ಥಾಪಕ ಮಹಮ್ಮದ್ ಅಶ್ಪಾಕ್ ಅವರನ್ನು ಸನ್ಮಾನಿಸಲಾಯಿತು.
ಸ್ಕೌಟ್ಸ್ ಆ್ಯಂಡ್ ಗೈಡ್ಸ್‌ನ ರಾಜ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಗೌರವ ಅತಿಥಿಗಳಾಗಿದ್ದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ಈ ಉದ್ಯೋಗ ಮೇಳದಲ್ಲಿ 350ಕ್ಕೂ ಹೆಚ್ಚು ಕಂಪನಿಗಳು ಬಂದಿದ್ದು 26,300ಕ್ಕೂ ಅಧಿಕ ಉದ್ಯೋಗಗಳ ಅವಕಾಶಗಳಿವೆ ಎಂದರು.
ಉಪನ್ಯಾಸಕ ವೇಣುಗೋಪಾಲ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
.jpg)
.jpg)
.jpg)