ಲೋಕಬಂಧು ನ್ಯೂಸ್ ಬ್ರಹ್ಮಾವರ, ಆ.4
ಬಡಗುತಿಟ್ಟಿನ ಹಿರಿಯ ಮದ್ದಲೆ ವಾದಕ ಹಾಗೂ ಯಕ್ಷಗಾನ ಗುರು ಇಲ್ಲಿನ ಚಾಂತಾರು ನಿವಾಸಿ ಕೃಷ್ಣಸ್ವಾಮಿ ಜೋಯಿಸ್ (75) ಅಲ್ಪಕಾಲದ ಅಸೌಖ್ಯದಿಂದ ಬ್ರಹ್ಮಾವರದ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ನಿಧನರಾದರು.ಹಂಗಾರಕಟ್ಟೆ ಯಕ್ಷಗಾನ ಕೇಂದ್ರದ ಮೊದಲ ತಂಡದ ವಿದ್ಯಾರ್ಥಿಯಾಗಿದ್ದ ಅವರು, ಭಾಗವತ ನಾರ್ಣಪ್ಪ ಉಪ್ಪೂರ ಮತ್ತು ಬೇಳಂಜೆ ತಿಮ್ಮಪ್ಪ ನಾಯಕ ಅವರ ಶಿಷ್ಯರಾಗಿ ಭಾಗವತಿಕೆ ಮತ್ತು ಮದ್ದಲೆ ವಾದನದಲ್ಲಿ ವಿಶೇಷ ಪರಿಣತಿ ಹೊಂದಿದ್ದರು. ಎಚ್.ಸುಬ್ಬಣ್ಣ ಭಟ್ಟರ ಮಾರ್ಗದರ್ಶನದಲ್ಲಿ ಪ್ರಸಾಧನ ತಜ್ಞರಾಗಿಯೂ ದೀರ್ಘಕಾಲ ಸೇವೆ ಸಲ್ಲಿಸಿದ್ದರು.
ಅಜಪುರ ಯಕ್ಷಗಾನ ಮಂಡಳಿಯ ಗೌರವಾಧ್ಯಕ್ಷರಾಗಿದ್ದ ಅವರು ಮಣ್ಣಿನ ಗಣಪತಿ ಮೂರ್ತಿ ರಚನೆಯಲ್ಲಿಯೂ ಪ್ರವೀಣರಾಗಿದ್ದರು.
ಸಾಲಿಗ್ರಾಮ ಮಕ್ಕಳ ಮೇಳದಲ್ಲಿ ದೀರ್ಘಕಾಲ ಮದ್ದಲೆ ವಾದಕರಾಗಿ ಸೇವೆಗೈದಿದ್ದ ಅವರು ದೇಶ- ವಿದೇಶಗಳ ಪ್ರದರ್ಶನಗಳಲ್ಲಿ ಹಿಮ್ಮೇಳ ವಾದಕರಾಗಿ, ಪ್ರಸಾಧನ ಕಲಾವಿದರಾಗಿ ಭಾಗವಹಿಸಿದ್ದರು.
ಯಕ್ಷಗಾನದ ಹಿಮ್ಮೇಳ ಹಾಗೂ ಮುಮ್ಮೇಳಗಳೆರಡರ ಪಾರಂಪರಿಕ ಸೂಕ್ಷ್ಮತೆಗಳನ್ನು ಬಲ್ಲ ಜೋಯಿಸ ಅವರು ನೂರಾರು ಶಿಷ್ಯರನ್ನು ರೂಪಿಸಿದ್ದಾರೆ.
ಯಕ್ಷಶಿಕ್ಷಣ ಟ್ರಸ್ಟ್‌ನಲ್ಲೂ ಹಲವಾರು ವರ್ಷ ಗುರುಗಳಾಗಿ ಸೇವೆ ಸಲ್ಲಿಸಿದ ಅವರಿಗೆ ಉಡುಪಿ ಯಕ್ಷಗಾನ ಕಲಾರಂಗ ಸಂಸ್ಥೆ 'ಯಕ್ಷಗಾನ ಕಲಾರಂಗ ಪ್ರಶಸ್ತಿ' ನೀಡಿ ಗೌರವಿಸಿತ್ತು.
ಮೃತರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.
ಅವರ ನಿಧನಕ್ಕೆ ಉಡುಪಿ ಯಕ್ಷಗಾನ ಕಲಾರಂಗ ಅಧ್ಯಕ್ಷ ಎಂ.ಗಂಗಾಧರ ರಾವ್ ಮತ್ತು ಕಾರ್ಯದರ್ಶಿ ಮುರಲಿ ಕಡೆಕಾರ್ ಸಂತಾಪ ಸೂಚಿಸಿದ್ದಾರೆ.