ಲೋಕಬಂಧು ನ್ಯೂಸ್ | ಮಣಿಪಾಲ, ಆ.4
ಹೆರ್ಗ ಗ್ರಾಮದ ಈಶ್ವರ ನಗರದ ಜನನಿ ಬಾರ್ ಆ್ಯಂಡ್ ರೆಸ್ಟೋರೆಂಟ್ ಸಮೀಪ ಯುವಕನ ಮೇಲೆ ಹಲ್ಲೆ ನಡೆಸಿದ ನಿಟ್ಟೆ ಕಾಲೇಜಿನ ನಾಲ್ವರು ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.
ಆಗಸ್ಟ್ 2ರಂದು ರಾತ್ರಿ ಸುಮಾರು 11.50 ಗಂಟೆಗೆ ಯಶ್'ರಾಜ್ ಅವರು ತನ್ನ ಸಹೋದರ ಪವನ್ ಕುಮಾರ್ ಹಾಗೂ ಸ್ನೇಹಿತ ಶ್ರೇಯಸ್ ಅವರೊಂದಿಗೆ ಈಶ್ವರ ನಗರದ ರಸ್ತೆಯಲ್ಲಿ ತೆರಳುತ್ತಿದ್ದ ವೇಳೆ ಎರಡು ಕಾರುಗಳಲ್ಲಿ ಬಂದ ಆರೋಪಿಗಳು ಪವನ್ ಕುಮಾರ್ ಅವರನ್ನು ತಡೆದು ನಿಲ್ಲಿಸಿ ವಿನಾಕಾರಣ ಜಗಳ ಆರಂಭಿಸಿದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಅಕ್ಷಯ್ ಎ. (21), ಪುನೀತ್ ಎಸ್. (21), ಶ್ಯಮಂತ ಕೆ.ಆರ್. (21) ಹಾಗೂ ಯಶವಂತ್ ಬಿ.ಜೆ. (21) ಬಂಧಿತರು. ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಪವನ್ ಕುಮಾರ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದೇ ವೇಳೆ ಮಧ್ಯಪ್ರವೇಶಿಸಿದ ಯಶ್'ರಾಜ್ ಹಾಗೂ ಶ್ರೇಯಸ್ ಮೇಲೆಯೂ ಹಲ್ಲೆ ನಡೆಸಿ ಕಾಲಿನಿಂದ ತುಳಿದು, ಬಟ್ಟೆ ಹರಿದು ಜೀವ ಬೆದರಿಕೆ ಹಾಕಿರುವುದಾಗಿ ಆರೋಪಿಸಿ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ನಡೆಸಿದ ಮಣಿಪಾಲ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ತನಿಖೆ ವೇಳೆ ಬಂಧಿತ ಆರೋಪಿಗಳೆಲ್ಲರೂ ನಿಟ್ಟೆ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳೆಂದು ತಿಳಿದುಬಂದಿದೆ. ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ತಿಮ್ಮೇಶ್ ಬಿ.ಎನ್. ತನಿಖೆ ನಡೆಸುತ್ತಿದ್ದಾರೆ.
