ಲೋಕಬಂಧು ನ್ಯೂಸ್ | ಉಡುಪಿ, ಆ.10
ಜಗತ್ತಿನ ಇತಿಹಾಸವನ್ನು ನಾವು ತಿಳಿದುಕೊಳ್ಳುತ್ತೇವೆ. ಆದರೆ, ನಮ್ಮ ಊರಿನ ಇತಿಹಾಸ ಗೊತ್ತಿರುವುದಿಲ್ಲ. ನಾವು ನಮ್ಮೂರಿನ ಚರಿತ್ರೆಯನ್ನು ಅಗತ್ಯವಾಗಿ ತಿಳಿದುಕೊಳ್ಳಬೇಕು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಹೇಳಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಉಡುಪಿಯ ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಕೋಶ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಇತಿಹಾಸ ಅಧ್ಯಾಪಕ ಸಂಘದ ಸಹಯೋಗದಲ್ಲಿ ಕಾಲೇಜಿನ ವಿಬುಧೇಶ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ 'ಅಳುಪೆರೆನ ಆಡಳಿತ ಐತಿಹಾಸಿಕ ದಾಖಲಾತಿಲು' ವಿಷಯ ಕುರಿತ ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಇತಿಹಾಸ ಪಠ್ಯ ಪುಸ್ತಕಗಳಲ್ಲಿ ದೊಡ್ಡ ದೊಡ್ಡ ಚಕ್ರವರ್ತಿಗಳ ಚರಿತ್ರೆ ಇರುತ್ತದೆ. ಆದರೆ, ನಮ್ಮ ಊರುಗಳನ್ನು ಆಳಿದ ಸಾಮಂತ ರಾಜರ ಬಗ್ಗೆ ಮಾಹಿತಿ ಇರುವುದಿಲ್ಲ. ಸಣ್ಣ ರಾಜರ ಇತಿಹಾಸದ ಬಗೆಗೆ ಆಕರಗಳೂ ಸಿಗುವುದಿಲ್ಲ ಎಂದರು.
ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ನಿರ್ದೇಶಕ ಡಾ.ಬಿ.ಜಗದೀಶ್ ಶೆಟ್ಟಿ ಮಾತನಾಡಿ, ಉಡುಪಿ ಜಿಲ್ಲೆಯ ಉದ್ಯಾವರದ ಇತಿಹಾಸ ಕಡಲಿನಂತೆ ವಿಸ್ತಾರವಾಗಿದೆ. ಅಳುಪ ಅರಸರ ರಾಜಧಾನಿಯಾಗಿ, ರಾಜಕೀಯ, ಆರ್ಥಿಕ, ಸಾಂಸ್ಕೃತಿಕ ಕೇಂದ್ರ ಅದಾಗಿತ್ತು ಎಂದರು.
ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಚಂದ್ರಕಾಂತ ಭಟ್ ಅಧ್ಯಕ್ಷತೆ ವಹಿಸಿದ್ದರು.
ನಿವೃತ್ತ ಪ್ರಾಧ್ಯಾಪಕ ಡಾ.ಪುಂಡಿಕಾಯಿ ಗಣಪಯ್ಯ ಭಟ್ ಮಾತನಾಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ಪೂರ್ಷಿಮಾ, ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು ಆಡಳಿತ ಮಂಡಳಿ ಸದಸ್ಯ ಜಯಪ್ರಕಾಶ್ ಕೆದ್ಲಾಯ, ಸ್ನೇಹಾ ಎಸ್., ಅಕಾಡೆಮಿ ಸದಸ್ಯ ಉದ್ಯಾವರ ನಾಗೇಶ್ ಕುಮಾರ್ ಉಪಸ್ಥಿತರಿದ್ದರು.
ಪ್ರೇಮನಾಥ್ ಸ್ವಾಗತಿಸಿದರು.
